ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

koyira elction
Published on

ವಿಜಯವಾಣಿ ಸುದ್ದಿಜಾಲ ಕುಂದಾಣ
ಕೊಯಿರಾ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷರಾಗಿ ಗೊಲ್ಲಹಳ್ಳಿ ಸುಧಾ ಶ್ರೀನಿವಾಸ್ ಅವಿರೋಧವಾಗಿ ಹಾಗೂ ಚುನಾವಣೆಯಲ್ಲಿ ಮಮತಾ ಶಿವಾಜಿಗೌಡ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ನಿಗದಿತ ಅವಧಿಯಲ್ಲಿ ಗೊಲ್ಲಹಳ್ಳಿ ಸುಧಾ ಶ್ರೀನಿವಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮನಗೊಂಡನಹಳ್ಳಿ ಮಮತಾ ಶಿವಾಜಿಗೌಡ 10 ಮತ ಪಡೆದು ವಿಜೇತರಾದರು, ಪ್ರತಿಸ್ಪರ್ಧಿ ಕೆ.ಹೂಸೂರು ವೀಣಾ ರವಿಕುಮಾರ್ 8 ಮತ ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ರವೀಂದ್ರಸಿಂಗ್ ತಿಳಿಸಿದರು.
ಕೊಯಿರಾ ಗ್ರಾಪಂಗೆ ಆದಾಯ ಮೂಲಗಳಿದಿದ್ದರೂ ಸರ್ಕಾರ ಅನುದಾನವನ್ನೇ ಸದ್ಬಳಸಿಕೊಂಡು ತಾರತಮ್ಯ ಮಾಡದೆ, ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಗೊಲ್ಲಹಳ್ಳಿ ಸುಧಾ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಪಂಚಾಯಿತಿಯಲ್ಲಿ 18 ಚುನಾಯಿತ ಸದಸ್ಯರಿದ್ದು, ವಾರ್ಷಿಕ ವರಮಾನ 13 ಲಕ್ಷ ರೂ.ಇದೆ. ಪ್ರಧಾನಮಂತ್ರಿ ಅಭಿವೃದ್ಧಿ ಯೋಜನೆಗೆ ಕೊಯಿರಾ ಗ್ರಾಮ ಆಯ್ಕೆಗೊಂಡಿದ್ದು, ಇದರಿಂದ 20 ಲಕ್ಷ ರೂ.ಪಂಚಾಯಿತಿ ಖಾತೆಗೆ ಜಮಾ ಆಗಿದೆ. ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ ಈವರೆಗೆ ಬಿಜೆಪಿಗೆ ಅಧಿಕಾರ ದೊರೆತಿರಲಿಲ್ಲ. ಈ ಬಾರಿ ಬಿಜೆಪಿ ಬೆಂಬಲಿತ ಸುಧಾ ಶ್ರೀನಿವಾಸ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದೆ. ಹಾಗೆಯೇ ಕಾಂಗ್ರೆಸ್ ಬೆಂಬಲಿತೆ ಮಮತಾ ಶಿವಾಜೀಗೌಡ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕು ಎಂದರು.
ಪಂಚಾಯಿತಿ ಉಪಾಧ್ಯಕ್ಷೆ ಮನಗೊಂಡನಹಳ್ಳಿ ಎಚ್.ಮಮತಾ ಶಿವಾಜೀಗೌಡ ಮಾತನಾಡಿ, ನರೇಗಾ ಯೋಜನೆಯಡಿ ಕಳೆದ ವರ್ಷ 50 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಾಗಿದ್ದವು. 2023-24ನೇ ಸಾಲಿನಲ್ಲಿ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಶಾಲಾ-ಕಾಲೇಜು, ರಾಜ ಕಾಲುವೆ, ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಮುಂತಾದ ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಸುಮಾರು 65 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಗೊಂಡಿವೆ. ಮುಂದೆಯೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ನಿಕಟಪೂರ್ವ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಮುನಿ ಆಂಜಿನಪ್ಪ, ಸದಸ್ಯರಾದ ವೀಣಾ ಎಚ್.ಎಂ.ರವಿಕುಮಾರ್, ರಮ್ಯಾ, ಆನಂದ್, ಮುನೀಂದ್ರ, ನಯನಾ, ಜಗದೀಶ್, ರಾಜಾರಾಮ್, ಬಿಂದು, ಶಿಲ್ಪಾ, ಸಂಕೇತ್, ಜೆಡಿಎಸ್ ಮುಖಂಡ ಜಗದೀಶ್, ಬಿಜೆಪಿ ಮುಖಂಡರಾದ ನಾಗರಾಜು, ನಾಗೇಂದ್ರ ಬಾಬು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net