ನಾಲ್ಕೇ ನಿಮಿಷದಲ್ಲಿ ಫಲಿತಾಂಶ ಬದಲು: ಕೌಡ್ಲೆ ಗ್ರಾಪಂ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಹೈಕೋರ್ಟ್ ಸಮಯದ ಪಾಠ

1 (2)
Published on

ಮಂಡ್ಯ: ಮನುಷ್ಯನಿಗೆ ಪ್ರತಿ ನಿಮಿಷವೂ ಎಷ್ಟು ಮುಖ್ಯ, ಅದರಲ್ಲಿಯೂ ಚುನಾವಣೆಯಲ್ಲಿ ಅದರ ಮೌಲ್ಯ ಎಷ್ಟಿದೆ ಎನ್ನುವುದಕ್ಕೆ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ. ಕೇವಲ ನಾಲ್ಕೇ ನಿಮಿಷ ತಡವಾಗಿದ್ದಕ್ಕೆ ಅಧ್ಯಕ್ಷ ಸ್ಥಾನದ ಚುನಾವಣೆಯಿಂದಲೇ ವಂಚಿತರಾಗುವಂತಾಯಿತು. ಮಾತ್ರವಲ್ಲದೆ ಹೈಕೋರ್ಟ್ ನ್ಯಾಯಾಧೀಶರು ಅಭ್ಯರ್ಥಿಗೆ ಸಮಯದ ಪಾಠ ಮಾಡಿದ್ದಾರೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕೌಡ್ಲೆ ಗ್ರಾಪಂ ಚುನಾವಣೆಯಲ್ಲಿ ಪ್ರೇಮಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಈ ಆಯ್ಕೆಯ ಹಿಂದಿನ ಬೆಳವಣಿಗೆ ಜನಪ್ರತಿನಿಧಿಗಳಿಗೆ ಪಾಠದಂತಿದೆ. ನಾಮಪತ್ರ ಸಲ್ಲಿಸುವ ಅವಧಿ ಇಂತಿಷ್ಟೆ ಎಂದು ನಿಗದಿ ಮಾಡಿರುವುದರ ಹಿಂದಿನ ಶಿಸ್ತು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ತಿಳಿ ಹೇಳಿದಂತಾಗಿದೆ.

ಏನಿದು ನಾಲ್ಕು ನಿಮಿಷ ಪ್ರಕರಣ?: 12 ಸದಸ್ಯ ಬಲದ ಕೌಡ್ಲೆ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆ.7ರಂದು ಚುನಾವಣೆ ನಿಗದಿಯಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಪ್ರೇಮಕುಮಾರ್ ಬೆಳಗ್ಗೆ 10.45ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಮತ್ತೊರ್ವ ಆಕಾಂಕ್ಷಿ ಪುಟ್ಟಸ್ವಾಮಿ 11.04ಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಸಮಯ ತಡವಾಗಿದ್ದ ಕಾರಣ ಪುಟ್ಟಸ್ವಾಮಿ ಅವರ ನಾಮಪತ್ರವನ್ನು ತಿರಸ್ಕರಿಸಿ ಚುನಾವಣಾಧಿಕಾರಿಯೂ ಆದ ತಾಪಂ ಸಂದೀಪ್ ತಿಳಿಸಿದರು.

ಇತ್ತ ಸಮಯವಾದರೂ ಕೋರಂ ಕೊರತೆ ಎದುರಾದ ಕಾರಣ ಚುನಾವಣೆ ಮುಂದೂಡಲಾಯಿತು. ಈ ಆದೇಶವನ್ನು ಪ್ರಶ್ನಿಸಿ ಹಾಗೂ ರಾಜಕೀಯದಿಂದಾಗಿ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಪುಟ್ಟಸ್ವಾಮಿ ಆ.8ರಂದು ಹೈಕೋಟ್ ಮೆಟ್ಟಿಲೇರಿದ್ದರು. ಅಂತೆಯೇ ಪುಟ್ಟಸ್ವಾಮಿ ಅವರ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ನಾಮಪತ್ರ ಊರ್ಜಿತವೆಂದು ತೀರ್ಪು ನೀಡಿದ್ದರು. ಈ ಹಿನ್ನೆಲೆಯಲ್ಲಿ ತೀರ್ಪನ್ನು ಪ್ರಶ್ನಿಸಿ ಪ್ರೇಮಕುಮಾರ್, ಆ.9ರಂದು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ದ್ವಿ ಸದಸ್ಯ ಪೀಠದ ಮುಖ್ಯನಾಯಮೂರ್ತಿ ಎಂ.ಆರ್.ಪ್ರಸನ್ನ ಬಿ.ವಾರಲೇ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್, ಪ್ರೇಮಕುಮಾರ ನಾಮಪತ್ರ ಸಲ್ಲಿಸಿರುವ ಪ್ರಕ್ರಿಯೆ ಕ್ರಮಬದ್ಧವಾಗಿದೆ. ಜತೆಗೆ ಚುನಾವಣೆಯಲ್ಲಿ ಸಮಯ ಮುಖ್ಯ ಎನ್ನುವುದರೊಂದಿಗೆ ಏಕಸದಸ್ಯ ಪೀಠದ ತೀರ್ಪನ್ನು ರದ್ದುಗೊಳಿಸಿ ಮತ್ತೊಂದು ತೀರ್ಪು ಹೊರಡಿಸಿದರು.

ದ್ವಿ ಸದಸ್ಯ ಪೀಠದ ತೀರ್ಪಿನ ಆಧಾರದ ಮೇಲೆ ಆ.16ರಂದು ಚುನಾವಣಾ ಪ್ರಕ್ರಿಯೆ ಮುಂದುವರೆಯಿತು. ಅಂತೆಯೇ ಕ್ರಮಬದ್ಧ ನಾಮಪತ್ರ ಸಲ್ಲಿಸಿದ್ದ ಪ್ರೇಮಕುಮಾರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ೋಷಣೆ ಮಾಡಲಾಯಿತು. ಇದರೊಂದಿಗೆ ಹೈಕೋರ್ಟ್ ಸಮಯದ ಬಗ್ಗೆ ಪಾಠ ಮಾಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net