

ಉಡುಪಿ: ಶೀತ, ಕೆಮ್ಮು, ಜ್ವರ ಚಿಕಿತ್ಸೆಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಬೇಕು. ತಪ್ಪಿದ್ದಲ್ಲಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳ ನೊಂದಣಿ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ರವಾನಿಸಿದ್ದಾರೆ.
ಬುಧವಾರ ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಕುಂದುಕೊರತೆ ನಿವಾರಣಾ ಸಮಿತಿ ಸಭೆ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ಜನರು ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದಾಗಿ ಎರಡನೇ ಅಲೆ ಪ್ರಾರಂಭವಾಗುವ ಸಾಧ್ಯತೆಗಳಿವೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು ರೋಗಿಗಳ ಬಗ್ಗೆ ನಿಖರ ಮಾಹಿತಿ ನೀಡಬೇಕು ಎಂದರು.
ವಂಶ ಪಾರಂಪರ್ಯವಾಗಿ ವೈದ್ಯಕೀಯ ಚಿಕಿತ್ಸೆ ನೀಡುವ ಹೆಸರಿನಲ್ಲಿ ಔಷಧೋಪಚಾರಗಳ ಸಂದರ್ಭ ಅಲೋಪಥಿ ಔಷಧ ನೀಡುವುದು ಅಪರಾಧ. ಇಂತಹ ವೃತ್ತಿಗಳು ಕಂಡುಬಂದಲ್ಲಿ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳೊಂದಿಗೆ ಕ್ಲಿನಿಕ್ ಅಥವಾ ನರ್ಸಿಂಗ್ ಹೋಮ್‌ಗಳನ್ನು ತೆರೆಯಲು ಅರ್ಜಿ ಸಲ್ಲಿಸಿದಾಗ ನಿಯಮಾನುಸಾರ ಅವರಿಗೆ ಶೀಘ್ರದಲ್ಲಿ ಲೈಸೆನ್ಸ್ ನೀಡಬೇಕೆಂದು ತಿಳಿಸಿದರು.
ಆಸ್ಪತ್ರೆಗಳಲ್ಲಿನ ಬಯೋ- ಮೆಡಿಕಲ್ ತ್ಯಾಜ್ಯಗಳನ್ನು 48 ಗಂಟೆಗಳ ಒಳಗಾಗಿ ಶೇಖರಿಸುವುದರೊಂದಿಗೆ ವೈಜ್ಞಾನಿಕ ರೀತಿಯಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದ ಅವರು, ವೈದ್ಯಕೀಯ ಚಿಕಿತ್ಸೆ ನೀಡುವಾಗ ನಿರ್ಲಕ್ಷದಿಂದ ತೊಂದರೆಗೊಳಗಾದವರಿಂದ ಬಂದ ದೂರುಗಳನ್ನು ವಿಳಂಬವಿಲ್ಲದೇ ಇತ್ಯರ್ಥ ಪಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರ್ ಚಂದ್ರ ಸೂಡ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಪ್ರಶಾಂತ್ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ನಣ್ಯ ಶೇರಿಗಾರ್ ಉಪಸ್ಥಿತರಿದ್ದರು.
ಭ್ರೂಣಲಿಂಗ ಪತ್ತೆ ಮಾಹಿತಿಗೆ 50 ಸಾವಿರ ರೂ. ಬಹುಮಾನ: ಜಿಲ್ಲೆಯಲ್ಲಿ ಪ್ರಸ್ತುತ 1000 ಗಂಡು ಮಕ್ಕಳಿಗೆ 956 ಹೆಣ್ಣು ಮಕ್ಕಳಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳ ಅನುಪಾತದಲ್ಲಿ ಅಸಮತೋಲನ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸರ್ಕಾರದ ನಿಯಮಾನುಸಾರ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದ ಸಮಿತಿಗಳು ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಭ್ರೂಣಲಿಂಗ ಪತ್ತೆ ಮಾಡಿ ಮಾಹಿತಿ ನೀಡುತ್ತಾರೆ ಎಂಬ ನಿಖರ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದರು.