

ವೇಣುವಿನೋದ್ ಕೆ.ಎಸ್.ಮಂಗಳೂರು
ಕರೊನಾ ಕ್ವಾರಂಟೈನ್, ಚಿಕಿತ್ಸೆಯ ಸ್ವರೂಪಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ, ಸದ್ಯದ ಪರಿಸ್ಥಿತಿ ನೋಡಿದರೆ ಇನ್ನು ಕೆಲ ದಿನಗಳಲ್ಲಿ ಕರೊನಾ ಪಾಸಿಟಿವ್ ಇದ್ದರೂ ಲಕ್ಷಣಗಳಿಲ್ಲದ ಆರೋಗ್ಯವಂತರಾಗಿರುವವರಿಗೂ ಮನೆಯಲ್ಲೇ ಚಿಕಿತ್ಸೆ ನೀಡುವ ಸಾಧ್ಯತೆಗಳೂ ಗೋಚರಿಸತೊಡಗಿವೆ.
ಇಂತಹ ಸಂದರ್ಭದಲ್ಲಿ ಕೋವಿಡ್ ಪೀಡಿತರು ಮನೆಯಿಂದ ಹೊರ ಬರದಂತೆ ನಿಗಾ ವಹಿಸುವುದು ಹೇಗೆ?
ಈ ಬಗ್ಗೆ ಮಂಗಳೂರು ಮೂಲದ ತಜ್ಞರು ‘ಕೋವಿಡ್ ಗಾರ್ಡ್’ ಎನ್ನುವ ವ್ಯವಸ್ಥೆ ರೂಪಿಸಿದ್ದಾರೆ. ಅದಕ್ಕೆ ವಾಚ್ ಮಾದರಿಯ ಉಪಕರಣವನ್ನೂ ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಪ್ರಾಥಮಿಕ ಮಾದರಿಯಷ್ಟೇ ಸಿದ್ಧಗೊಂಡಿದೆ. ಈ ಡಿವೈಸನ್ನು ಮರುಬಳಕೆ ಮಾಡಬಹುದು. ಇದನ್ನು ಧರಿಸಿದ ವ್ಯಕ್ತಿ ಬಳಿಕ ಬೇಡವೆಂದಾಗ ತೆಗೆದು ಪಕ್ಕಕ್ಕೆ ಇಡುವಂತಿಲ್ಲ. ಒಮ್ಮೆ ಧರಿಸಿದರೆ ಕೋವಿಡ್ ನೆಗೆಟಿವ್ ಆದ ಬಳಿಕ ಅಥವಾ ಇಲಾಖೆಯವರು ಇಚ್ಛಿಸಿದಾಗ ಮಾತ್ರವೇ ತೆಗೆಯಲು ಸಾಧ್ಯ. ತುಂಡರಿಸಿದರೆ ಅದರ ಮೆಸೇಜ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಹೋಗುತ್ತದೆ. ಅದನ್ನು ಧರಿಸಿ ಹೊರಗೆ ಸುತ್ತಾಡಿದರೆ ಸೀಮಿತ ಪರಿಧಿಯ ಹೊರಗೆ ನಡೆದರೂ ಸಂದೇಶ ಹೋಗುತ್ತದೆ.
ಕೋವಿಡ್ ನಿಯಂತ್ರಣದಲ್ಲಿ ಮುಖ್ಯವಾಗಿರುವುದು ಕೋವಿಡ್ ರೋಗಿಗಳು ಅಥವಾ ಶಂಕಿತರು ತಮ್ಮ ಸೋಂಕನ್ನು ಹೊರಗೆ ಸಮುದಾಯಕ್ಕೆ ಹರಡಂತೆ ನೋಡಿಕೊಳ್ಳುವುದು. ಅದಕ್ಕೆ ಬೇಕಾದ ನೆರವನ್ನು ಈ ಡಿವೈಸ್ ನೀಡುತ್ತದೆ ಎನ್ನುತ್ತಾರೆ ಇದರ ಹಿಂದಿನ ರೂವಾರಿ, ಸಮುದಾಯ ಆರೋಗ್ಯ ತಜ್ಞರೂ ಆಗಿರುವ ಡಾ.ಶಾಂತಾರಾಮ ಬಾಳಿಗ. ಅವರ ಉಸ್ತುವಾರಿಯಲ್ಲಿ ಬೆಂಗಳೂರಿನ ಆರ್‌ಟಿಡಬ್ಲ್ಯುಒ ಹೆಲ್ತ್‌ಕೇರ್ ಸೊಲ್ಯೂಷನ್ಸ್ ಇದನ್ನು ಅಭಿವೃದ್ಧಿಪಡಿಸಿದೆ.
ಮಂಗಳೂರು ನಗರದ ಮಲೇರಿಯಾ ನಿರ್ವಹಣಾ ಸಾಫ್ಟ್‌ವೇರ್ ನಿರ್ಮಾಣದಲ್ಲೂ ಡಾ.ಬಾಳಿಗ ನೇತೃತ್ವ ವಹಿಸಿದ್ದು, ಅದರಿಂದಲೇ ಈ ಕೋವಿಡ್ ಗಾರ್ಡ್ ವ್ಯವಸ್ಥೆಯ ಯೋಚನೆ ಹೊಳೆದಿದೆ.
ಈಗಿನ ವ್ಯವಸ್ಥೆ ಹೇಗಿದೆ?
ಪ್ರಸ್ತುತ ಕ್ವಾರಂಟೈನ್ ಮಾಡುವವರ ಮೊಬೈಲ್‌ಗೆ ಆರೋಗ್ಯಸೇತು ಡೌನ್‌ಲೋಡ್ ಮಾಡಿಸಿ, ಅವರ ಮನೆಯ ಲೊಕೇಶನ್ ಜಿಪಿಎಸ್‌ನಲ್ಲಿ ಗುರುತು ಹಾಕಿ ಜಿಯೋಫೆನ್ಸಿಂಗ್ ಮಾಡಲಾಗುತ್ತಿದೆ. ಆದರೆ ಕ್ವಾರಂಟೈನ್ ಆದ ವ್ಯಕ್ತಿ ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಮಾಡಿ ಹೊರಗೆ ಸುತ್ತಾಡಿದರೆ ಯಾವುದೇ ಮಾಹಿತಿಯೂ ಅಧಿಕಾರಿಗಳಿಗೆ ಗೊತ್ತಾಗದು. ಈಗಾಗಲೇ ಇಂತಹ ಹಲವು ಪ್ರಕರಣಗಳ ಬಗ್ಗೆ ಜನರಿಂದ ದೂರುಗಳೂ ಬರುತ್ತಿವೆ.
ಮನೆಯಲ್ಲೇ ಚಿಕಿತ್ಸೆ ಸಾಧ್ಯತೆ
ಕೋವಿಡ್ ಚಿಕಿತ್ಸೆ ವೆಚ್ಚದಾಯಕ. ಅದರಲ್ಲಿ ಗಂಭೀರ ಪ್ರಕರಣಗಳನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿಕೊಂಡೇ ಚಿಕಿತ್ಸೆ ನೀಡಲೇಬೇಕಾಗುತ್ತದೆ. ಆದರೆ ಬಹುತೇಕ ಪ್ರಕರಣಗಳು ಗಂಭೀರ ಆಗಿರುವುದಿಲ್ಲ. ಅಲ್ಲದೆ ಲಕ್ಷಣಗಳೇ ಇರುವುದಿಲ್ಲ. ಅಂಥವರನ್ನು ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡುವ ಬದಲು ಮನೆಯಲ್ಲೇ ಇರಿಸುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತಾರೆ ಡಾ.ಶಾಂತಾರಾಮ ಬಾಳಿಗ.
ಪ್ರಯೋಜನಗಳು ಕೋವಿಡ್‌ಗಾರ್ಡ್ ಈಗಿನ ಸನ್ನಿವೇಶಕ್ಕೆ ಅಲ್ಲದೆ ಭವಿಷ್ಯದಲ್ಲಿ ಇಂತಹ ಇತರ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಬಳಕೆಯಾಗ ಬಹುದು. ಕೋವಿಡ್ ರೋಗಿಗಳನ್ನು ಒಂದೇ ಮನೆಯೊಳಗೆ ಇರುವಂತೆ ನೋಡಿಕೊಳ್ಳಬಹುದು. ಕ್ವಾರಂಟೈನ್‌ನವರನ್ನು ಒಂದು ಪರಿಧಿಯಿಂದ ಹೊರಗೆ ಬರದಂತೆ ನೋಡಿಕೊಳ್ಳಬಹುದು, ಇದಕ್ಕೆ ಪೂರಕ ಅಲಾರ್ಮ್ ಹಾಗೂ ಎಸ್‌ಎಂಎಸ್ ವ್ಯವಸ್ಥೆ ಇದೆ. ಸದ್ಯ ಪ್ರಾಥಮಿಕ ಮಾದರಿಯಷ್ಟೇ ಸಿದ್ಧಗೊಂಡಿದೆ, ಮುಂದೆ ರೋಗಿಯ ರಕ್ತದೊತ್ತಡ, ಆಮ್ಲಜನಕ ಮಟ್ಟ ಗುರುತಿಸಬಲ್ಲ ಡಿವೈಸ್ ಬರಲಿದೆ.
ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳಿಗೆ ಈ ಯೋಜನೆಯನ್ನು ವಿವರಿಸಿದ್ದೇವೆ, ಅವರು ಹೆಚ್ಚಿನ ಆಸಕ್ತಿ ತೋರಿಸಿಲ್ಲ. ತಮ್ಮದೇ ವ್ಯವಸ್ಥೆ ಇರುವುದಾಗಿ ಅವರು ಹೇಳುತ್ತಾರೆ. ನಾವು ನಮ್ಮ ರೀತಿ ಯೋಜನೆ ರೂಪಿಸಿದ್ದೇವೆ, ಇದು ಉತ್ತಮವೆನಿಸಿದರೆ ವಿಶ್ವ ಆರೋಗ್ಯ ಸಂಸ್ಥೆಯ ಗಮನವನ್ನೂ ಸೆಳೆಯಬಹುದು. - ಡಾ.ಶಾಂತಾರಾಮ ಬಾಳಿಗ, ಸಮುದಾಯ ಆರೋಗ್ಯ ತಜ್ಞ, ಮಂಗಳೂರು