ಮುರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್

17 CRP 02 (1) (1)
Published on

ಚನ್ನರಾಯಪಟ್ಟಣ: ಕರೊನಾ ಸೋಂಕು ದೃಢಪಟ್ಟವರನ್ನು ಪ್ರತ್ಯೇಕವಾಗಿರಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಕೋವಿಡ್ ಕೇರ್ ಸೆಂಟರ್ ತೆರೆಯುವ ಸಂಬಂಧ ತಾಲೂಕಿನ ಗೂರಮಾರನಹಳ್ಳಿ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲವನ್ನೂ ನಿರ್ವಹಣೆ ಮಾಡಲಾಗುವುದು. ಅಲ್ಲದೆ, ಮುರಾರ್ಜಿ ವಸತಿ ಶಾಲೆ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭವಾಗ ಲಿದ್ದು, ಜು.20ರಿಂದಲೇ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

ಸುಮಾರು 100 ಬೆಡ್‌ಗಳ ವ್ಯವಸ್ಥೆಯೊಂದಿಗೆ ಶುಚಿ ಹಾಗೂ ಬಿಸಿ ಆಹಾರದ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಹಾಗೂ ಇತರ ಮೂಲ ಸೌಕರ್ಯ ಒದಗಿಸಲಾಗುವುದು. ಅಲ್ಲದೆ ವೈದ್ಯರು ಉಳಿದುಕೊಳ್ಳಲು ಶಿಕ್ಷಕರ ವಸತಿ ನಿಲಯಗಳನ್ನು ಬಳಕೆ ಮಾಡಿಕೊಳ್ಳಲಾಗು ವುದು. ನಿತ್ಯ ವೈದ್ಯರ ತಂಡ ಕಾರ್ಯ ನಿರ್ವಹಿಸಲಿದ್ದು, ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನೇತೃತ್ವ ವಹಿಸಲಿದೆ ಎಂದರು.

ತಾಲೂಕಿನಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಬಹುತೇಕ ಯಶಸ್ವಿ ಕಂಡಿದ್ದು, ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಲಾಕ್‌ಡೌನ್ ವಿಚಾರವಾಗಿ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್ ಜೆ.ಬಿ.ಮಾರುತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಸಿಪಿಐ ಕುಮಾರ್, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net