

ಬೆಳಗಾವಿ: ಮೊನ್ನೆಯಷ್ಟೇ ಛೋಟಾ ಬೇಟಾ ಬಿಡುಗಡೆಯಾಗಿದ್ದ. ಇವತ್ತು ನಾನು ಮತ್ತು ನಮ್ಮಾಕೆ. ಇಂದಲ್ಲಾ ನಾಳೆ ಬಡೇ ಬೇಟಾ ಸಹ ಆಸ್ಪತ್ರೆಯಿಂದ ಮನೆಗೆ ಬಂದೇ ಬರ್ತಾನೆ…! ಇದು ಕರೊನಾ ವೈರಸ್ ವಿರುದ್ಧ ಯುದ್ಧ ಗೆದ್ದ ದಂಪತಿಯ ಆತ್ಮವಿಶ್ವಾಸದ ನುಡಿಗಳು.
ವೈರಸ್‌ಗೆ ತುತ್ತಾಗಿದ್ದ ಹಿರೇಬಾಗೇವಾಡಿ ನಿವಾಸಿ 50 ವರ್ಷದ ವ್ಯಕ್ತಿ (ಪಿ-182)ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ದೂರವಾಣಿ ಮೂಲಕ ಅವರನ್ನು ‘ವಿಜಯವಾಣಿ’ ಮಾತನಾಡಿಸಿದಾಗ ಯಾವುದೇ ಭೀತಿ ವ್ಯಕ್ತಪಡಿಸಲಿಲ್ಲ. ಹೊರಗಡೆ ಹೇಳುತ್ತಿರುವಷ್ಟು ಕ್ರೂರ ಪರಿಸ್ಥಿತಿಯನ್ನು ನಾವು ಆಸ್ಪತ್ರೆಯಲ್ಲಿ ಒಂದು ದಿನವೂ ಅನುಭವಿಸಲಿಲ್ಲ ಎಂದು ಸುಮಾರು 23 ದಿನ ಆಸ್ಪತ್ರೆಯಲ್ಲಿ ಹೇಗಿದ್ದೆ. ವೈದ್ಯರು ಹೇಗೆ ಉಪಚಾರ ನೀಡಿದರು ಎನ್ನುವುದನ್ನು ಅವರು ವಿವರಿಸಿದ್ದಾರೆ.
ಆಸ್ಪತ್ರೆ ಎಂದೆನಿಸಲಿಲ್ಲ: ಕರೊನಾ ಸೋಂಕು ತಗುಲಿದರೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಆದರೆ, ಯಾವುದೇ ದಿನವೂ ನಮಗೆ ಕ್ರೂರವಾಗಿರಲಿಲ್ಲ. ಪ್ರತ್ಯೇಕ ವಾರ್ಡ್‌ನಲ್ಲಿದ್ದ ನಾನು ಹೆಚ್ಚು ವಿಶ್ರಾಂತಿ ತೆಗೆದುಕೊಂಡೆ. ಮನೆಯಲ್ಲಿದ್ದಂತೆಯೇ ಎಂದಿನಂತೆ ಸ್ನಾನ ಮಾಡಿ, ನಮ್ಮ ಬಟ್ಟೆ ನಾವೇ ತೊಳೆದು, ಧರಿಸುತ್ತಿದ್ದೆವು. ಆಸ್ಪತ್ರೆ ಸಿಬ್ಬಂದಿ ನಿತ್ಯ ಬೆಳಗ್ಗೆ ಉಪ್ಪಿಟ್ಟು, ಅವಲಕ್ಕಿ, ಪಲಾವ್ ನೀಡುತ್ತಿದ್ದರು. ಮಧ್ಯಾಹ್ನ ಮತ್ತು ರಾತ್ರಿ ಅನ್ನ-ಸಾರು, ಜೋಳದ ರೊಟ್ಟಿ, ಬೇಳೆ ಸಾರು ಹೀಗೆ ಮನೆ ರೀತಿಯ ಊಟವನ್ನೇ ನಮಗೆ ಕೊಡುತ್ತಿದ್ದರು ಎಂದರು.
ಸಾವು ಗೆದ್ದ ಸಂತಸ: ಕರೊನಾ ಬಂದರೆ ಸಾವು ಖಚಿತ ಎಂದೇ ಎಲ್ಲೆಡೆ ಬಿಂಬಿತವಾಗಿದ್ದಂತೆ ನಾವೂ ನಂಬಿದ್ದೆವು. ಆದರೆ, ನಮಗೆ ಒಂದು ದಿನವೂ ಸಾಯುತ್ತೇವೆ ಎಂದು ಅನ್ನಿಸಲೇ ಇಲ್ಲ. ಇಂದು ನಾನು ಮತ್ತು ನನ್ನಾಕೆ (40 ವರ್ಷ, ಪಿ-192) ಕರೊನಾ ವೈರಸ್‌ನಿಂದ ಪೂರ್ಣ ಗುಣಮುಖವಾಗಿ ಮನೆಗೆ ಬಂದಿದ್ದೇವೆ ಎಂದು ಆಸ್ಪತ್ರೆಯಲ್ಲಿ ಕಳೆದ ದಿನಗಳನ್ನು ವಿವರಿಸಿದರು.
ಕುಟುಂಬದವರಿಂದ ಧೈರ್ಯ: ನಮ್ಮ ಇಬ್ಬರೂ ಮಕ್ಕಳಿಗೆ ಕೆಮ್ಮು-ನೆಗಡಿ ಬಂದಿಲ್ಲ.ಜ್ವರವಂತೂ ಇರಲೇ ಇಲ್ಲ. ಆದರೂ, ಕರೊನಾ ದೃಢಪಟ್ಟಿದೆ ಎಂದಾಗ ಅವರೆಲ್ಲ ಆಘಾತಗೊಂಡರು. ನಾವು ಆಸ್ಪತ್ರೆಯಲ್ಲಿದ್ದಾಗ ಇಬ್ಬರು ಮಕ್ಕಳು, ನಮ್ಮೂರಿನ ನಾಲ್ಕೈದು ಜನ ನಿತ್ಯ ಮಾತನಾಡಿಕೊಳ್ಳುತ್ತಿದ್ದೆವು. ಮಗ ಮೊಬೈಲ್ ಮೂಲಕ ನೆಂಟರು ಹಾಗೂ ಗೆಳೆಯರ ಜತೆ ಮಾತನಾಡುತ್ತಿದ್ದಾಗ ಎಲ್ಲರೂ ಆತ್ಮವಿಶ್ವಾಸ ತುಂಬುತ್ತಿದ್ದರು. ಮೇಲಿಂದ ಮೇಲೆ ವೈದ್ಯರು ತಪಾಸಣೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದರು, ಇಂದು ಗುಣಮುಖರಾಗಿ ಬಿಡುಗಡೆಗೊಂಡಿರುವುದಕ್ಕೆ 23 ದಿನ ವೈದ್ಯರ ನಮಗೆ ನೀಡಿದ ಸೇವೆ, ಪ್ರೀತಿ, ಕಾಳಜಿ, ಕರುಣೆಯೇ ಪ್ರಮುಖ ಕಾರಣ ಎಂದು ಪಿ-182 ಧನ್ಯತಾಭಾವ ವ್ಯಕ್ತಪಡಿದರು.
ಗುಣಮುಖಗೊಂಡ ದಂಪತಿ ಡಿಸ್ಚಾರ್ಜ್: ಕರೊನಾ ಸೋಂಕು ತಗುಲಿದ್ದ ಹಿರೇಬಾಗೇವಾಡಿ ಗ್ರಾಮದ ದಂಪತಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಮಾಡಲಾಯಿತು. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಏ. 3ರಂದು ಆಸ್ಪತ್ರೆಗೆ ದಾಖಲಾಗಿದ್ದ 50 ವರ್ಷದ ವ್ಯಕ್ತಿ (ಪಿ-182) ಹಾಗೂ ಅವರ ಪತ್ನಿ (ಪಿ-192) ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಭಾನುವಾರ ಯಾವುದೇ ಕರೊನಾ ಸೋಂಕು ಪ್ರಕರಣ ದೃಢಪಟ್ಟಿಲ್ಲ. ಜಿಲ್ಲಾದ್ಯಂತ ಈವರೆಗೆ ಒಟ್ಟು 54 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 4 ಜನರನ್ನು ಈಗಾಗಲೇ ಸರ್ಕಾರದ ಮಾರ್ಗ ಸೂಚಿಯಂತೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಭಾನುವಾರ ಮತ್ತಿಬ್ಬರು ಸೇರಿ ಒಟ್ಟು 6 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಸೇವೆಗೆ ಪ್ರಾಣ ಪಣಕ್ಕಿಟ್ಟ ವೈದ್ಯರು ಮನೆ, ಹೆತ್ತವರು, ಮಕ್ಕಳನ್ನೆಲ್ಲ ಬಿಟ್ಟು, ಪ್ರಾಣವನ್ನೂ ಪಣಕ್ಕಿಟ್ಟು ಕರೊನಾ ವಿರುದ್ಧ ಯುದ್ಧೋಪಾದಿಯಲ್ಲಿ ವೈದ್ಯಕೀಯ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅವರ ಅಂತಃಕರಣದ ಸೇವೆಗೆ ತಬ್ಲಿಗಳು ಮನಸೋತಿದ್ದಾರೆ. ತಮ್ಮ ಮೊದಲಿನ ನಡತೆಯಿಂದ ದೂರ ಉಳಿದು ವೈದ್ಯರಿಗೆ ಕೃತಜ್ಞತಾ ಭಾವ ತೋರುತ್ತಿದ್ದಾರೆ.
‘ಅಮ್ಮಾ ಮನೆಗೆ ಬಾರಮ್ಮ’ ಎಂದು ಪುಟ್ಟ ಮಗು ತೊದಲು ನುಡಿಯಿಂದ ಗೋಗರೆಯುತ್ತಿದ್ದರೂ ಸೋಂಕಿತರ ಚಿಕಿತ್ಸಾ ಸೇವೆಯಲ್ಲಿ ತೊಡಗಿದ್ದ ನರ್ಸ್ ಒಬ್ಬಳ ಕರ್ತವ್ಯ ಪ್ರಜ್ಞೆ ರಾಜ್ಯದ ಗಮನ ಸೆಳೆದಿತ್ತು. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕರೆ ಮಾಡಿ ಅಭಿನಂದಿಸಿ, ಧೈರ್ಯ ತುಂಬಿದ್ದು ಹಳೆಯ ಸುದ್ದಿ. ಇದೀಗ ಚಿಕಿತ್ಸೆಗೆ ಸಹಕರಿಸುತ್ತಿರುವ ತಬ್ಲಿಗಳು ಹಾಗೂ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವುದು ವೈದ್ಯಕೀಯ ಸಿಬ್ಬಂದಿಗೆ ಮತ್ತಷ್ಟು ಬಲ ಬಂದಂತಾಗಿದೆ.
| ರವಿ ಗೋಸಾವಿ