

ಯಾದಗಿರಿ: ಲಾಕ್ಡೌನ್ನಿಂದ ಉದ್ಯೋಗ ಕಳೆದುಕೊಂಡ ಗ್ರಾಮೀಣ ಭಾಗದ ಜನತೆಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಕೋವಿಡ್-19 ನಿಯಂತ್ರಣದ ಬಗ್ಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸಭೆ ನಡೆಸಿ ಮಾತನಾಡಿದ ಅವರು, ಕಳೆದೆರಡು ತಿಂಗಳಿನಿಂದ ಕರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದ್ದು, ಉದ್ಯೋಗ ಅರಸಿ ಹೊರ ರಾಜ್ಯಗಳಿಗೆ ತೆರಳಿದ ಜನತೆ ಮರಳಿ ತಮ್ಮೂರಿಗೆ ಬರುತ್ತಿದ್ದಾರೆ. 14 ದಿನ ಕ್ವಾರಂಟೈನ್ ಮುಗಿದ ಬಳಿಕ ಅವರಿಗೆ ಕಡ್ಡಾಯವಾಗಿ ನರೇಗಾ ಯೋಜನೆಯಡಿ ಕೆಲಸ ನೀಡಬೇಕು ಎಂದು ತಾಕೀತು ಮಾಡಿದರು.
ಲಾಕ್ಡೌನ್ನಿಂದ ಬದುಕು ಕಳೆದುಕೊಂಡು ಹೈರಾಣಾಗಿರುವ ಬಡ ಮತ್ತು ಮದ್ಯಮ ವರ್ಗದ ಜನರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 1610 ಕೋಟಿ ರೂ.ಗಳ ಪ್ಯಾಕೇಜ್ ಘೊಷಣೆ ಮಾಡಿದ್ದಾರೆ. ರೈತರು, ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ತಲಾ 5 ಸಾವಿರ ರೂ. ಗಳ ಪರಿಹಾರಧನ ಘೋಷಣೆ ಮಾಡಿದ್ದು, ಫಲಾನುಭವಿಗಳಿಗೆ ತಲುಪಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಶಾಸಕ ನರಸಿಂಹ ನಾಯಕ ಮಾತನಾಡಿ, ಮಹಾರಾಷ್ಟ್ರದ ಗಡಿಯಿಂದ ಜಿಲ್ಲೆಗೆ ವಾಪಸ್ ಆಗುತ್ತಿರುವ ಕಾರ್ಮಿಕರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮೂರು ಪಟ್ಟು ಟಿಕೆಟ್ ದರ ಪಡೆದುಕೊಳ್ಳಲಾಗುತ್ತಿದೆ. ಬೆಳಗಾವಿಯಿಂದ ಸುರಪುರಕ್ಕೆ 330 ರೂ.ಗಳ ದರವಿದ್ದರೆ, ಸಾರಿಗೆ ಸಂಸ್ಥೆ 1100 ರೂ. ದರ ನಿಗದಿ ಪಡಿಸಿದ್ದಾರೆ. ಸಂಸ್ಥೆ ಅಧಿಕಾರಿಗಳು ಮಾನವೀಯತೆ ಮರೆತಿದ್ದಾರೆ ಎಂದು ಗುಡುಗಿದರು.
ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ಬೇರೆ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಇವರನ್ನು ಕುಡಿವ ನೀರು ಮತ್ತು ಶೌಚಗೃಹದ ವ್ಯವಸ್ಥೆ ಇರುವ ವಸತಿನಿಲಯ, ಶಾಲೆ ಅಥವಾ ಸಾರ್ವಜನಿಕರ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಬೇಕು.
| ಪ್ರಭು ಬಿ.ಚವ್ಹಾಣ್, ಜಿಲ್ಲಾ ಉಸ್ತುವಾರಿ ಸಚಿವ