

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ. ಜನತೆ ಕೋವಿಡ್ ಕುರಿತು
ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡಿನಲ್ಲಿ ಈಗ 27 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 25 ಮಂದಿ ಹೋಮ್ ಐಸೋಲೇಶನ್ ಹಾಗೂ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದ್ದಂತೆ ಜಿಲ್ಲೆಯ ಐದು ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ಜಾಗೃತಿ ಹಾಗೂ ತಪಾಸಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಕೇರಳದಿಂದ ರಾಜ್ಯಕ್ಕೆ ಬರುವ ಗಡಿ
ಭಾಗದಲ್ಲಿ ನಿರ್ಬಂಧ ವಿಧಿಸುವ ಅಗತ್ಯ ಈಗ ಬಂದಿಲ್ಲ. ಆದರೆ ಮಂಗಳೂರಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ಸ್ವರ್ಗ, ಸುಳ್ಯಪದವು ಮತ್ತು ಸುಳ್ಯದ ಜಾಲ್ಸೂರಿನ ಚೆಕ್‌ಪೋಸ್ಟ್‌ಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಕಾಸರಗೋಡಿನಲ್ಲಿ ಪ್ರತೀ ದಿನ ಒಂದೆರಡು ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ. ಅಲ್ಲಿನ ಆರೋಗ್ಯಾಧಿಕಾರಿ ಜತೆ ಜಿಲ್ಲಾ ಆರೋಗ್ಯ ಇಲಾಖೆ ಸಂಪರ್ಕದಲ್ಲಿದೆ. ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ಲಕ್ಷಣದ ಪ್ರಕರಣಗಳು ಕಾಣಿಸಿಕೊಂಡರೆ ತಪಾಸಣೆ, ಅಗತ್ಯ ಪರೀಕ್ಷೆಗಳನ್ನು ಮಾಡಲು ಸಿದ್ಧತೆ ನಡೆಸಲಾಗಿದೆ. ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಕೋವಿಡ್ ಜಾಗೃತಿ ಮಾಡುವುದು, ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಐಎಲ್‌ಐ, ಸಾರಿ ಪ್ರಕರಣಗಳು ದಾಖಲಾದಲ್ಲಿ ಪರೀಕ್ಷೆಗೆ ಒಳಪಡಿಸುವುದು, ಕೇಂದ್ರ ಹಾಗೂ ರಾಜ್ಯದ ಮಾರ್ಗಸೂಚಿಗಳನ್ನು ಪಾಲಿಸುವುದು, ಜಿಲ್ಲೆಯ ವೆನ್ಲಾಕ್ ಆಸ್ಪತ್ರೆ ವೈರಾಲಜಿ ಲ್ಯಾಬ್‌ನಲ್ಲಿ ಕೋವಿಡ್ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.
ಕೇರಳದ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುವಾಗ ಹಾಗೂ ಶಬರಿಮಲೆ ಯಾತ್ರೆಗೆ ತೆರಳಿದವರು ಮತ್ತೆ ಜಿಲ್ಲೆಗೆ ಬರುವ ಸಮಯದಲ್ಲಿ ಅವರಲ್ಲಿ ಯಾವುದಾದರೂ ಕೋವಿಡ್ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಂಡರೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು.
ಜಿಲ್ಲೆಯಲ್ಲಿ 321 ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಲು ರಾಜ್ಯಮಟ್ಟದಿಂದ ಸೂಚನೆ ಬಂದಿದೆ. 100 ಮಂದಿಯ ರ‌್ಯಾಪಿಡ್ ಟೆಸ್ಟ್ ಹಾಗೂ 221 ಮಂದಿಯ ಆರ್‌ಟಿಪಿಸಿಆರ್ ಮಾಡಲು ಸೂಚನೆ ನೀಡಲಾಗಿದೆ. ವಿಟಿಎಂ 300 ಕಿಟ್‌ಗಳು ಇದ್ದು, ಶೀಘ್ರ 1 ಸಾವಿರ ವಿಟಿಎಂ ಕಿಟ್‌ಗಳು ಜಿಲ್ಲೆಗೆ ಬರಲಿವೆ. ಆರ್‌ಟಿಪಿಸಿಆರ್ ಒಂದು ಲಕ್ಷ ಕಿಟ್‌ಗಳಿದ್ದು, ಪರೀಕ್ಷೆ ನಡೆಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸದಾಶಿವ ಶಾನುಭಾಗ್ ಉಪಸ್ಥಿತರಿದ್ದರು.