ನ್ಯಾಯ ವ್ಯವಸ್ಥೆಗೆ ಕೌಟಿಲ್ಯನ ಅರ್ಥಶಾಸ್ತ್ರ ಬುನಾದಿ

conclave
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂದು ಶಿಕ್ಷಣ ವ್ಯವಸ್ಥೆ ತುಂಬಾ ಬದಲಾಗಿದೆ. ಒಳ್ಳೆಯ ಕಾನೂನುಗಳನ್ನು ದೇಶದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಭಾರತೀಯ ನ್ಯಾಯ ವ್ಯವಸ್ಥೆಗೆ ಕೌಟಿಲ್ಯನ ಅರ್ಥಶಾಸ್ತ್ರ ಬುನಾದಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪೊ›. ಎಂ.ಕೆ. ರಮೇಶ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಹೊಸ ಕಾನೂನು ಶಾಲೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಾಚಾರ್ಯರ ಸಮಾವೇಶ ಹಾಗೂ ಭಾರತದಲ್ಲಿ ಕಾನೂನು ಶಿಕ್ಷಣದ ಸವಾಲುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ದೇಶೀಯ ಕಾನೂನುಗಳು, ನೀತಿ ಸಂಹಿತೆ ಬಗ್ಗೆ ತಿಳಿದುಕೊಂಡರೆ ಸಾಲದು. ಅಂತಾರಾಷ್ಟ್ರೀಯ ಕಾನೂನುಗಳ ಬಗ್ಗೆ ಪ್ರಾಧ್ಯಾಪಕರು ಅರಿತುಕೊಳ್ಳಬೇಕು. ಹೊಸ ಸವಾಲುಗಳಿಗೆ ಪ್ರಾಧ್ಯಾಪಕರು ಸದಾ ಸಿದ್ಧರಾಗಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಬೋಧನೆ ಮೂಲಕ ವಿಷಯಗಳನ್ನು ಮನದಟ್ಟು ಮಾಡಬೇಕು. ಆಧುನಿಕ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಪೊ›. ಡಾ.ಸಿ.ಬಸವರಾಜು ಮಾತನಾಡಿ, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಅವುಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತುಕೊಂಡು ಇತ್ಯರ್ಥ ಪಡಿಸಬೇಕು. ಸಮಸ್ಯೆಗಳನ್ನು ಎದುರಿಸಿದಾಗ ಅನುಭವ ದೊರೆಯುತ್ತದೆ ಎಂದರು.

ಆಡಳಿತ ಮಂಡಳಿ, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಸಮೂಹ ಪರಸ್ಪರ ಪೂರಕವಾಗಿದ್ದರೆ ಮಾತ್ರ ಸಂಸ್ಥೆ ಬೆಳವಣಿಗೆ ಹೊಂದಲಿದೆ. ಗುಣಮಟ್ಟದ ಕಾನೂನು ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಕಾನೂನು ಶಿಕ್ಷಣದಲ್ಲಿ ಯಾವ ಬದಲಾವಣೆಗಳನ್ನು ತರಬೇಕು ಎಂಬುದರ ಕುರಿತು ಚರ್ಚೆಗಳಾಗಬೇಕು. ನಾವೆಲ್ಲರೂ ಪ್ರತಿದಿನ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಬೇಕು. ಕಲಿಯುವಿಕೆ ಪ್ರಕ್ರಿಯೆ ಎಂದಿಗೂ ಮುಗಿಯುವುದಿಲ್ಲ ಎಂದರು.

ಕುಲಸಚಿವರಾದ ಅನುರಾಧ ವಸ್ತ್ರದ, ಪೊ›.ಡಾ.ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಮೋಹನ ಆರ್., ಗಿರೀಶ ಗೌಡ ಪಾಟೀಲ, ಡಾ. ಸುನೀಲ ಬಾಗಡೆ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net