ತುಮಕೂರಿನಲ್ಲಿ ಅಂಗವಿಕಲರಿಗೆ ಕೌಶಲ ಕೇಂದ್ರ

10Tmk_Skill_Centre
Published on

ತುಮಕೂರು: ಅಂಗವಿಕಲರಿಗೆ ಉದ್ಯೋಗವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಕೌಶಲಭರಿತರನ್ನಾಗಿ ರೂಪಿಸುವ 8 ಕೋಟಿ ರೂಪಾಯಿ ವೆಚ್ಚದ ಕೌಶಲ ತರಬೇತಿ ಕೇಂದ್ರ ತುಮಕೂರಿನಲ್ಲಿ ತಲೆಎತ್ತಲಿದೆ.

ಕೌಶಲ ತರಬೇತಿ ಕೇಂದ್ರವನ್ನು ಇನ್ಫೋಸಿಸ್ ಫೌಂಡೇಷನ್ ನೆರವಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿಸಲಿದೆ. ನಗರದ ಹೊರವಲಯದ ಬೆಳಗುಂಬದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವಾಕ್ ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಶಾಲೆ ಆವರಣದ 4 ಎಕರೆ ಪ್ರದೇಶದಲ್ಲಿ 2 ಎಕರೆ ಪ್ರದೇಶದಲ್ಲಿ ವಸತಿಯುತ ಕೌಶಲ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.

8 ಕೋಟಿ ರೂ. ವೆಚ್ಚ: 8 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕೌಶಲ ತರಬೇತಿ ಕೇಂದ್ರ ಸ್ಥಾಪಿಸಲಾಗುತ್ತಿದ್ದು ಅಂಗವಿಕಲರಿಗೆ ವೃತ್ತಿ ಕೌಶಲದ ತರಬೇತಿ ನೀಡಲಾಗುವುದು. ಇದರ ಸಂಪೂರ್ಣ ನಿರ್ವಹಣೆಯನ್ನು 5 ವರ್ಷಗಳ ಕಾಲ ಇನ್ಫೋಸಿಸ್ ಫೌಂಡೇಷನ್ ನಿರ್ವಹಿಸಲಿದೆ.

ಐಟಿಐ, ಡಿಪ್ಲೊಮೊ ಬದಲು ಅಂಗವಿಕಲರು ನೇರವಾಗಿ ವಸತಿಯುತ ಕೌಶಲ ತರಬೇತಿ ಕೇಂದ್ರದಲ್ಲಿ 6, 12 ಹಾಗೂ 18 ತಿಂಗಳ ಕೋರ್ಸ್ ಗಳನ್ನು ಆರಂಭಿಸಿ ಅವರಿಗೆ ಉದ್ಯೋಗ ಅವಕಾಶ ಸೃಷ್ಟಿಸುವುದು ಅಥವಾ ಸ್ವಂತ ಉದ್ಯೋಗ ಆರಂಭಿಸುವ ಕೌಶಲವನ್ನು ನೀಡಲಾಗುವುದು. ತರಬೇತಿ ಸಂಸ್ಥೆಯಲ್ಲಿ ತಜ್ಞರು ವೃತ್ತಿ ಕೌಶಲ ನೈಪುಣ್ಯತೆಯನ್ನು ಕಲಿಸಿಕೊಡಲಿದ್ದಾರೆ.

10 ಕೋರ್ಸ್‌ಗಳು : ಕಂಪ್ಯೂಟರ್ ಸಾಫ್ಟ್‌ವೇರ್ ಆಪರೇಷನ್ ಹಾಗೂ ಕಂಪ್ಯೂಟರ್ ಹಾರ್ಡ್ ವೇರ್ ನಿರ್ವಹಣೆ ಕೋರ್ಸ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಈವೆಂಟ್ ಮ್ಯಾನೇಜ್ಮೆಂಟ್, ಟೈಲರಿಂಗ್, ಎಂಬ್ರಾಯಿಡರಿ, ಅಗರಬತ್ತಿ ಹೊಸೆಯುವುದು, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ಉಪಕರಣಗಳ ರಿಪೇರಿ, ಸೀಮೆಸುಣ್ಣ, ಮೇಣದಬತ್ತಿ, ಕರಕುಶಲ ವಸ್ತುಗಳ ತಯಾರಿಸುವುದು, ಪೇಂಟಿಂಗ್ ಕೋರ್ಸ್‌ಗಳನ್ನು ಕೌಶಲ ತರಬೇತಿ ಕೇಂದ್ರದಲ್ಲಿ ಆರಂಭಿಸಲಾಗುವುದು. 6, 8 ಹಾಗೂ 12 ತಿಂಗಳು ಅವಧಿಯ ಈ ಕೋರ್ಸ್‌ಗಳು ವೃತ್ತಿ ಕೌಶಲ ಪೂರಕವೆನಿಸಿವೆ. ಈ ಕೋರ್ಸ್‌ಗಳನ್ನು ಕಲಿಯುವ ಅಂಗವಿಕಲರು ಸ್ವಂತ ಉದ್ಯೋಗವನ್ನಾದರೂ ಆರಂಭಿಸಬಹುದು ಅಥವಾ ಉದ್ಯೋಗ ಅವಕಾಶ ಪಡೆಯಬಹುದು. ಆ ಮಟ್ಟಿಗೆ ಅವರನ್ನು ತರಬೇತಿ ಕೇಂದ್ರದಲ್ಲಿ ಸಿದ್ಧಗೊಳಿಸಲಾಗುವುದು ಎನ್ನುತ್ತಾರೆ ಕೌಶಲ ಅಭಿವೃದ್ಧಿ ತರಬೇತಿ ಉಪಸಮಿತಿ ಸಭಾಪತಿ ಸಾಗರನಹಳ್ಳಿ ಪ್ರಭು.

ಶಂಕುಸ್ಥಾಪನ ಸಮಾರಂಭ: ಅಂಗವಿಕಲರಿಗೆ ಇನ್ಫೋಸಿಸ್ ಫೌಂಡೇಷನ್ ಕೌಶಲ ತರಬೇತಿ ಶಂಕಸ್ಥಾಪನಾ ಸಮಾರಂಭವನ್ನು ಮಾ.12 ರಂದು ಬೆಳಗ್ಗೆ 8.30ಕ್ಕೆ ನಗರದ ಹೊರವಲಯದ ಬೆಳಗುಂಬದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳು, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಇನ್ಫೋಸಿಸ್‌ನ ಯು.ರಾಮದಾಸ್ ಕಾಮತ್ ಶಂಕುಸ್ಥಾಪನೆ ನೆರವೇರಿಸುವರು. ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಫಲಕ ಅನಾವರಣಗೊಳಿಸುವರು. ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಡಿ.ಸಿ.ಗೌರಿಶಂಕರ್, ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಉಪಸ್ಥಿತರಿರುವರು.

ಸಾಂಪ್ರದಾಯಿಕ ವ್ಯಾಸಂಗದಿಂದ ಉದ್ಯೋಗಗಿಟ್ಟಿಸಿಕೊಳ್ಳುವುದು ಅಂಗವಿಕಲರಿಗೆ ಕಷ್ಟಸಾಧ್ಯವೆನಿಸಲಿದೆ. ಹಾಗಾಗಿ, ವಸತಿಯುತ ಕೌಶಲ ತರಬೇತಿ ಕೇಂದ್ರದಲ್ಲಿ ಅವರನ್ನು ಕೌಶಲಭರಿತರನ್ನಾಗಿ ರೂಪಿಸುವ ಮಹತ್ವದ ಉದ್ದೇಶ ಹೊಂದಲಾಗಿದೆ. ಪ್ರತೀ ಕೋರ್ಸ್‌ಗೆ 10-15 ಮಂದಿಗೆ ಸೇರ್ಪಡೆಗೆ ಅವಕಾಶ ಇರಲಿದೆ. ಸಾಗರನಹಳ್ಳಿ ಪ್ರಭು ಸಭಾಪತಿ, ಕೌಶಲ ಅಭಿವೃದ್ಧಿ ತರಬೇತಿ ಉಪಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net