ಉಜ್ಜಿನಿ ಶ್ರೀಗಳಿಂದ ಮೌನ ಪ್ರತಿಭಟನೆ ಆರಂಭ: ಒಂದು ಹೊತ್ತು ಪ್ರಸಾದ ಸೇವನೆಗೆ ನಿರ್ಧಾರ

ujjini photos (14)
Published on

ಕೊಟ್ಟೂರು: ಉಜ್ಜಿನಿ ಸದ್ಧರ್ಮ ಪೀಠಾಧ್ಯಕ್ಷರ ಕುರಿತು ಉಂಟಾಗಿರುವ ವಿವಾದ ನಿವಾರಣೆಯಾಗುವ ತನಕ ದಿನಕ್ಕೊಂದು ಬಾರಿ ಪ್ರಸಾದ ಸ್ವೀಕರಿಸುವ ವ್ರತ ಕೈಗೊಂಡಿರುವುದಾಗಿ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಸಿದ್ಧ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.

ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ಕೇದಾರದ ಶ್ರೀ ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿಕೆ ನೀಡಿದ ನಂತರ ಐದು ದಿನ ಪ್ರತಿಕ್ರಿಯೆ ನೀಡದ ಉಜ್ಜಿನಿ ಶ್ರೀಗಳು, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ಪ್ರಕಟಿಸಿದರು. ಮುಂದಿನ ಪರಿಸ್ಥಿತಿ ಅವಲೋಕಿಸಿ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ ಸ್ಮರಣೆ, ಪೂಜೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಉಪವಾಸ ವ್ರತ ಕೈಗೊಳ್ಳುವ ಮುನ್ಸೂಚನೆಯನ್ನೂ ನೀಡಿದರು.

ರಂಭಾಪುರಿ ಶ್ರೀ, ಕೇದಾರಶ್ರೀಗಳೊಂದಿಗೆ ವೇದಿಕೆ ಹಂಚಿಕೊಳ್ಳುತ್ತೇವೆ ಎಂದಾಗಲಿ, ಇಲ್ಲ ಎಂದಾಗಲಿ ಹೇಳುವುದಿಲ್ಲ. ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿ ಅನುಗ್ರಹದಂತೆ ನಡೆಯುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾಯ ಮಹಾಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮೀಜಿ ಜತೆ ಶೀಘ್ರ ಸಮಾಲೋಚನೆ ನಡೆಸಲಾಗುವುದು. ಒಂದು ಪೀಠದ ಜಗದ್ಗುರುಗಳ ನೇಮಕದಲ್ಲಿ ಉಳಿದ ಪೀಠದ ಜಗದ್ಗುರುಗಳು ಹಸ್ತಕ್ಷೇಪ ಮಾಡಬಾರದು ಎಂದು ಮಾನವ ಧರ್ಮ ಸಂಸ್ಥೆಯ ಬೈಲಾದಲ್ಲಿದೆ. ಅದು ರಂಭಾಪುರಿ ಶ್ರೀ ಮತ್ತು ಕೇದಾರಶ್ರೀಗಳಿಗೂ ತಿಳಿದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net