ಧರ್ಮ ಪಾಲಿಸದವರಿಗೆ ದೊರಕದು ನೆಲೆ-ಬೆಲೆ- ರಂಭಾಪುರಿ ಜಗದ್ಗುರುಗಳ ಆಶೀರ್ವಚನ

051222 Dharma awareness meeting at K. Ayyanahalli
ಕೆ.ಅಯ್ಯನಹಳ್ಳಿಯಲ್ಲಿ ಭಾನುವಾರ ಶ್ರೀ ಕರಿಲಿಂಗೇಶ್ವರ ದೇವಸ್ಥಾನವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು.
Published on

ಕೊಟ್ಟೂರು: ಭೌತಿಕ ಸಂಪತ್ತನ್ನು ತೃಣವಾಗಿ ಕಾಣುವ ಸತ್ಪುರುಷರು ಸತ್ಯ ಧರ್ಮಗಳೇ ನಿಜವಾದ ಸಂಪತ್ತೆಂದು ಭಾವಿಸಿ ಸಮಾಜಕ್ಕೆ ಮತ್ತು ಜನತೆಗೆ ಬೆಳಕಿನ ಸಂದೇಶ ಸಾರಿದ್ದಾರೆ. ಆದರೆ, ದುರಾಸೆ ಬಲೆಯಲ್ಲಿ ಬಿದ್ದು ಸಂಪತ್ತಿಗಾಗಿ ವ್ಯರ್ಥ ಹೋರಾಟ ನಡೆಸಿದ ಅನೇಕರು ಕಾಲಗರ್ಭದಲ್ಲಿ ಸೇರಿ ಹೋಗಿದ್ದಾರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಕರು ಹೇಳಿದರು.

ಕೆ.ಅಯ್ಯನಹಳ್ಳಿಯಲ್ಲಿ ಶ್ರೀಗುರು ಕರಿಲಿಂಗೇಶ್ವರ ಶಿಲಾ ಮಂಟಪ ಶತಮಾನೋತ್ಸವ, ಸಭಾ ಭವನ ಉದ್ಘಾಟನೆ, ಶ್ರೀ ವೀರಭದ್ರೇಶ್ವರ, ಭದ್ರಕಾಳಿ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ನಡೆದ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಭಾನುವಾರ ಆಶೀರ್ವಚನ ನೀಡಿದರು.

ಉನ್ನತ ಗುರಿ-ಧ್ಯೇಯಯುಳ್ಳ ವ್ಯಕ್ತಿತ್ವ ವಿಕಸನಕ್ಕೆ ಧರ್ಮಾಚರಣೆಗಳೇ ದಾರಿ ದೀಪವಾಗಿವೆ. ಧರ್ಮಾಚರಣೆಗಳನ್ನು ಪಾಲಿಸದವರ ವ್ಯಕ್ತಿತ್ವಕ್ಕೆ ಎಂದಿಗೂ ಸಮಾಜದಲ್ಲಿ ನೆಲೆ-ಬೆಲೆ ದೊರಕದು. ಫಲಾಪೇಕ್ಷೆ ಇಲ್ಲದೆ ಜಗತ್ತಿಗೆ ಬೆಳಕಿನ ಸಂದೇಶ ಸಾರಿದ ಅಸಂಖ್ಯಾತ ಮಹಾತ್ಮರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಧರ್ಮದ ಹಾದಿಯಲ್ಲಿ ನಡೆದಾಗ ಚತುರ್ವಿಧ ಪುರುಷಾರ್ಥಗಳು ತಾನಾಗಿಯೇ ದೊರಕಲು ಸಾಧ್ಯ. ಭೌತಿಕ ಸಂಪನ್ಮೂಲಗಳನ್ನು ಹೊಂದಿರುವವರಿಗೆ ಅದರ ಜತೆಯಲ್ಲಿಯೇ ಆಧ್ಯಾತ್ಮಿಕ ಜ್ಞಾನದ ಹಸಿವು ಸಹ ಇರುಬೇಕು ಎಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಶಿವಾಚಾರ್ಯರು ತಮ್ಮ ಉತ್ಕೃಷ್ಟವಾದ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಬೋಧಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಭೀಮಾನಾಯ್ಕ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಸಮಾನತೆ, ಸಹಬಾಳ್ವೆ ಸಾಕಾರವಾಗುತ್ತದೆ. ಪಂಚಪೀಠಗಳು ಎಲ್ಲ ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುತ್ತಿವೆ. ಕೆ.ಅಯ್ಯನಹಳ್ಳಿ ಅಭಿವೃದ್ಧಿಗಾಗಿ ಶಾಸಕರ ಅನುದಾನದಡಿ 3.50 ಕೋಟಿ ರೂ.ಗಳನ್ನು ನೀಡಲಾಗಿದೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ಪ್ರಾಸ್ತವಿಕ ಕೆ.ಅಯ್ಯನಹಳ್ಳಿ ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯರು ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ಕೊಟ್ಟೂರು ಹಿರೇಮಠದ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರು ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಜಿ.ರೂಪ ಸುರೇಶಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹರಪನಹಳ್ಳಿ ತಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯರು, ಕೊಟ್ಟೂರು ಕ್ರಿಯಾಮೂರ್ತಿ ಶ್ರೀ ಶಂಕರಸ್ವಾಮಿಗಳು, ಬೆಣ್ಣಿಹಳ್ಳಿಯ ಶ್ರೀ ಪಂಚಾಕ್ಷರಿ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ನಂದೀಪುರದ ಶ್ರೀ ಡಾ.ಮಹೇಶ್ವರ ಸ್ವಾಮಿ, ಪ್ರಮುಖರಾದ ಪಾಟೀಲ್, ಪಂಚಯ್ಯ, ಶೇಖರಪ್ಪ, ಕೆಸಿಟಿ ಕೊಟ್ರಯ್ಯ, ಎಂಒ ಕೊಟ್ರಯ್ಯ, ಪಾಲಾಕ್ಷಪ್ಪ, ನಾಗಪ್ಪ, ಜಿಎಂ ಪರಮೇಶ್ವರಯ್ಯ, ಎಂ.ಜಿ.ಕೊಟ್ರೇಶ, ಎಂ.ಎಂ.ಮೃತ್ಯುಂಜಯ, ಎಂ.ಜಿ.ಪ್ರಶಾಂತ ಇತರರಿದ್ದರು. ದೇವಸ್ಥಾನದ ಹೊಸ ಮೂರ್ತಿಗಳಿಗೆ ಜಗದ್ಗುರುಗಳು ಪ್ರಾಣ ಪ್ರತಿಷ್ಠಾಪನೆ ಮಾಡಿ, ಸಭಾ ಭವನ ಉದ್ಘಾಟಿಸಿದರು. ನಂತರ ಭಕ್ತರ ಸಮ್ಮುಖದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net