ಶೇಂಗಾಕ್ಕೆ ಟೆಂಡರ್ ಬರೆಯದ ದಲಾಲರು- ಕೊಟ್ಟೂರಿನಲ್ಲಿ ಪ್ರತಿಭಟನೆ

Kotturu AMPC Peanut Market
ಕೊಟ್ಟೂರು ಕೃಷಿ ಮಾರುಕಟ್ಟೆಯಲ್ಲಿ ಶೇಂಗಾಕ್ಕೆ ಟೆಂಡರ್ ಬರೆಯದ ಕಾರಣ ಎಪಿಎಂಸಿ ಕಾರ್ಯದರ್ಶಿ ಎ.ಕೆ. ವೀರಣ್ಣ ಮಾರುಕಟ್ಟೆಗೆ ಭೇಟಿ ಪರಿಶೀಲಿಸಿದರು.
Published on

ಕೊಟ್ಟೂರು: ದಲಾಲರು ಶೇಂಗಾ ಟೆಂಡರ್ ಬರೆಯದ ಕಾರಣ ರೈತರು ಇಲ್ಲಿನ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ಮಂಗಳವಾರವೂ ಶೇಂಗಾ ಸ್ವಚ್ಛತೆ ಇಲ್ಲವೆಂದು ದಾಲಾಲರು ಟೆಂಟರ್ ಬರೆದಿರಲಿಲ್ಲ. ಆಗ ರೈತರು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ನಂತರ ಕೆಲ ಷರತ್ತುಗಳ ಮೇಲೆ ಟೆಂಡರ್ ಬರೆಯಲಾಗಿತ್ತು.

ಕೊಟ್ಟೂರು ತಾಲೂಕು ಸೇರಿ ಇತರೆ ಜಿಲ್ಲೆ ಮತ್ತು ತಾಲೂಕುಗಳಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಶೇಂಗಾ ಮಾರಾಟ ಮಾಡಲು ತಂದಿದ್ದರು. ಶೇಂಗಾ ಟೆಂಡರ್ ಆಗದ ಕಾರಣ ಮಾರುಕಟ್ಟೆಯಲ್ಲಿಯೇ 2 ಸಾವಿರಕ್ಕೂ ಹೆಚ್ಚು ಶೇಂಗಾ ಚೀಲಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ.

ಖಾಸಗಿಯಾಗಿ ಸಭೆ ನಡೆಸಿದ ದಲಾಲರು ಮತ್ತು ಖರೀದಿದಾರರು

ದಲಾಲರು ಮತ್ತು ಖರೀದಿದಾರರು ಶನಿವಾರ ಖಾಸಗಿಯಾಗಿ ಸಭೆ ನಡೆಸಿ ಶೇಂಗಾ ಮಾರುಕಟ್ಟೆಗೆ ಯಾರು ಟೆಂಡರ್ ಬರೆಯಬಾರದು ಮತ್ತು ಖರೀದಿಸಬಾರದು ಎಂದು ತೀರ್ಮಾನ ಮಾಡಿದ್ದರು ಎನ್ನಲಾಗಿದೆ. ಈ ಕುರಿತು ಎಪಿಎಂಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಯಾವುದೇ ಮಾಹಿತಿ ಇಲ್ಲ.

ಪೊಲೀಸರು ಬಿಗಿ ಬಂದೋಬಸ್ತ್

ಶೇಂಗಾ ಸ್ವಚ್ಛತೆ ಇಲ್ಲದ ಕಾರಣ, ದಾಲಾಲರು ಟೆಂಡರ್ ಬರೆಯದಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಶೇಂಗಾವನ್ನು ಸ್ವಚ್ಛ ಮಾಡಿಕೊಂಡೇ ತಂದಿರುತ್ತಾರೆ. ತೀರಾ ಸ್ವಚ್ಛ ಮಾಡಲು ಆಳುಗಳ ಸಮಸ್ಯೆ ಇದೆ. ನಾವು 50 ಕಿ.ಮೀ. ದೂರದಿಂದ ಶೇಂಗಾ ತಂದಿದ್ದೇವೆ. ಟ್ಯಾಕ್ಟರ್ ಬಾಡಿಗೆ ಹೇಗೆ ಕಟ್ಟಬೇಕು. ದಾಲಾಲರು ಮತ್ತು ವರ್ತಕರು ಹಾಗೂ ಎಪಿಎಂಸಿ ಆಡಳಿತ ಸೇರಿಕೊಂಡು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ದಲಾಲರ ಸಂಘದ ಅಧ್ಯಕ್ಷರು ಹಾಗೂ ಎಪಿಎಂಸಿ ಅಧ್ಯಕ್ಷರು ರೈತರ ಸಮಸ್ಯೆ ಬಗೆಹರಿಸಿಲ್ಲ. | ನಾರಾಯಣಪ್ಪ, ಕಾನಹೊಸಹಳ್ಳಿ ರೈತ 30 ಸಾವಿರ ಶೇಂಗಾ ಮಾರುಕಟ್ಟೆಗೆ ಬರಬೇಕಿತ್ತು. ಶೇಂಗಾ ಸ್ವಚ್ಛತೆ ಇಲ್ಲದ ಕಾರಣ ದಾಲಾಲರು ಮತ್ತು ಖರೀದಿದಾರರು ಶನಿವಾರ ಸಭೆ ಸೇರಿ ಶೇಂಗಾ ಟೆಂಡರ್ ಬರೆಯದಿರುವಂತೆ ತೀರ್ಮಾನಿಸಿದ್ದಾರಂತೆ. ಈ ವಿಷಯ ನಮಗೆ ಗೊತ್ತಿಲ್ಲ. ಗೊತ್ತಾಗಿದ್ದಾರೆ ರೈತರಿಗೆ ಶೆಂಗಾವನ್ನು ಮಾರಾಟಕ್ಕೆ ಮಾರುಕಟ್ಟೆಗೆ ತರಬೇಡಿ ಎಂದು ತಿಳಿಸುತ್ತಿದ್ದೆ.| ಎ.ಕೆ. ವೀರಣ್ಣ, ಎಪಿಎಂಸಿ ಕಾರ್ಯದರ್ಶಿ, ಕೊಟ್ಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net