

ಬಳ್ಳಾರಿ: ಜಿಲ್ಲೆಯ ಕೊಟ್ಟೂರಿನಲ್ಲಿ ಶ್ರೀ ಗುರು ಬಸವೇಶ್ವರ ರಥೋತ್ಸವ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ಕೊಟ್ಟೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲದೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಹಲವು ಭಕ್ತರು ಪಾದಯಾತ್ರೆ ಬರುವುದು ಇಲ್ಲಿನ ವಿಶೇಷ.
ಶ್ರೀಗುರು ಕೊಟ್ಟೂರೇಶ್ವರನ ಅದ್ಧೂರಿ ರಥೋತ್ಸವ ಹಿನ್ನೆಲೆಯಲ್ಲಿ ದೂರದೂರುಗಳಿಂದ ಬರುವ ಪಾದಯಾತ್ರಿಕರಿಗೆ ದಾರಿಯಲ್ಲಿನ ಗ್ರಾಮಗಳಲ್ಲಿ ಸಕಲ ವ್ಯವಸ್ಥೆ ಮಾಡಿರಲಾಗುತ್ತದೆ. ಆಯಾ ಗ್ರಾಮಸ್ಥರೇ ಮುಂದೆ ನಿಂತು ವ್ಯವಸ್ಥೆ ಕಲ್ಪಿಸುವುದು ವಿಶೇಷ.
ಹೀಗೆ ನೂರಾರು ಕೀಲೊ ಮಿಟರ್ಗಳಿಂದ ಬರುವ ಪಾದಯಾತ್ರಿಕರಲ್ಲಿ ಎಲ್ಲ ವಯಸ್ಸಿನ ಭಕ್ತರು ಇರುತ್ತಾರೆ. ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರಿನಿಂದ 85 ವರ್ಷದ ಅಜ್ಜಿಯೊಬ್ಬರು 58 ಕಿಲೋಮೀಟರ್ ಪಾದಯಾತ್ರೆಯಲ್ಲಿ ಬಂದಿದ್ದಾರೆ.
ದಾವಣಗೆರೆಯಿಂದ ಕೊಟ್ಟೂರಿಗೆ ಪಾದಯಾತ್ರೆಯಲ್ಲಿ ಬಂದಿದ್ದಾರೆ ಈ ಅಜ್ಜಿ. ಸಂತೆಬೆನ್ನೂರಿನ 85 ವರ್ಷದ ಕಮಲಮ್ಮ ಪಾದಯಾತ್ರೆ ಬಂದವರು. ಕೈಯಲ್ಲಿ ಕೇಸರಿ ಧ್ವಜ ಹಿಡಿದು ಕುಟುಂಬಸ್ತರೊಂದಿಗೆ ನಡದುಕೊಂಡೇ ಕೊಟ್ಟೂರಿಗೆ ಬಂದಿದ್ದಾರೆ. ಕೊಟ್ಟೂರೇಶ್ವರನ ಸನ್ನಿಧಿಗೆ ಪಾದಯಾತ್ರೆ ಮೂಲಕ ಬಂದ್ರೆ ಇಷ್ಟಾರ್ಥ ನೆರೆವೆರಿಸ್ತಾನೆ ಎಂಬುದು ಭಕ್ತರ ನಂಬಿಕೆ.
"ನನ್ನ ಮೊಮ್ಮಕ್ಕಳು ಚನ್ನಾಗಿ ಓದಲಿ ಎಂದು ಪಾದಯಾತ್ರೆ ಬಂದಿದ್ದೇನೆ" ಎನ್ನುತ್ತಾರೆ ಕಮಲಮ್ಮ. ದಾವಣಗೆರೆಯಿಂದ ಬಿಟ್ಟು ಮೂರು ದಿನಗಳಲ್ಲಿ ಕೊಟ್ಟೂರು ತಲುಪಿದ್ದಾರೆ ಈ ಅಜ್ಜಿ.