

ಕೊಟ್ಟೂರು: ಅಧಿಕ ಮಳೆಯಿಂದ ಈರುಳ್ಳಿ ಬೆಳೆಗಾರರು ನಷ್ಟಕ್ಕೊಳಗಾಗಿದ್ದು, ಸರ್ಕಾರ ಸಮೀಕ್ಷೆ ಮಾಡಿಸಿ ಶೀಘ್ರವೇ ಪರಿಹಾರ ನೀಡಬೇಕೆಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಸಿದ್ದೇಶ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಈರುಳ್ಳಿ ಬೆಳೆಗೆ ವಿಮೆ ಮಾಡಿಸಿದ್ದರೂ ಪರಿಹಾರ ಬಂದಿಲ್ಲ. ತಕ್ಷಣವೇ ವಿಮೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಭರಮಪ್ಪ, ಕಡ್ಡಾಯವಾಗಿ ಬೆಳೆಗಳಿಗೆ ವಿಮೆ ಮಾಡಿಸಿ ಎಂದು ಹೇಳುವ ಸರ್ಕಾರ, ಪ್ರಕೃತಿ ವಿಕೋಪದಿಂದ ಬೆಳೆಗಳು ನಾಶವಾದಾಗ ಇಲ್ಲ ಸಲ್ಲದ ಕಾನೂನು ಹೇಳುತ್ತದೆ. ಇದರಿಂದ ವಿಮೆ ಕಟ್ಟಿದ ರೈತನಿಗೆ ಪರಿಹಾರ ಸಿಗುತ್ತಿಲ್ಲ. ಹೀಗಾಗಿ ಬೆಳೆವಿಮೆ ಕಾನೂನು ಸಡಿಲಗೊಳಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಕಾರ್ಯದರ್ಶಿ ಮಂಜುನಾಥ, ತಾಲೂಕು ಅಧ್ಯಕ್ಷ ಉಮೇಶ, ಬೆಳೆಗಾರರಾದ ರಮೇಶ, ಮೌನೇಶ, ಸಿದ್ದೇಶ, ಭದ್ರಗೌಡ, ಈರಣ್ಣ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶಪ್ಪ, ತಾಲೂಕು ಅಧ್ಯಕ್ಷ ನಾಗರಾಜ್ ಇತರರಿದ್ದರು.