ಕನ್ನಡಿಗರಿಗಿದೆ ಇತಿಹಾಸ ಪ್ರಜ್ಞೆಯ ಕೊರತೆ, ಕಸಾಪ ವಿಜಯನಗರ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಬೇಸರ

171122 Kotturu State Level History Workshop
ಕೊಟ್ಟೂರಿನಲ್ಲಿ ಗುರುವಾರ ಆಯೋಜಸಿದ್ದ ಎರಡು ದಿನದ ಇತಿಹಾಸ ಕಾರ್ಯಾಗಾರಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಚಾಲನೆ ನೀಡಿದರು.
Published on

ಕೊಟ್ಟೂರು: ಕನ್ನಡಿಗರಿಗೆ ಇತಿಹಾಸದ ಅರಿವಿನ ಕೊರತೆ ಇದ್ದು, ಇಂದಿನ ಪೀಳಿಗೆ ಇವೆಲ್ಲವನ್ನೂ ಅಧ್ಯಯನಮಾಡಿ, ಇತಿಹಾಸ ಮೇಲೆ ಬೆಳಕು ಚೆಲ್ಲಿ ವಾಸ್ತವ ಇತಿಹಾಸ ಸೃಷ್ಟಿಸಬೇಕಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಗೂ ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ಕೊಟ್ಟೂರೇಶ್ವರ ಕಾಲೇಜಿನಲ್ಲಿ ಆಯೋಜಸಿದ್ದ ರಾಜ್ಯಮಟ್ಟದ ಇತಿಹಾಸ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಕನ್ನಡ ಸಾಹಿತ್ಯ ಮತ್ತು ಚರಿತ್ರೆ ಪರಸ್ಪರ ಪೂರಕವಿದ್ದು, ನಮ್ಮ ನಾಡಿನಲ್ಲಿ ಇತಿಹಾಸಕ್ಕೆ ಬೇಕಾದಷ್ಟು ಸಾಕ್ಷ್ಯಗಳು ದೊರೆಯುತ್ತವೆ. ಅದನ್ನು ಕ್ಷೇತ್ರ ಕಾರ್ಯದ ಮೂಲಕ ಹೊರತೆಗೆದು ಪೂರ್ವಜರ ಬದುಕು, ಅಂದಿನ ಸಮಾಜ ವ್ಯವಸ್ಥೆ, ಕಟ್ಟುಪಾಡು, ಸಂಸ್ಕೃತಿ ಅರ್ಥಮಾಡಿಕೊಂಡರೆ ಮಾತ್ರ ಇತಿಹಾಸ ತಿಳಿಯಲು ಸಾಧ್ಯ ಎಂದರು.

ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಮುಖ್ಯಸ್ಥ ಹಾಗೂ ಸಂಶೋಧಕ ಡಾ ಜೆ.ಎಂ. ನಾಗಯ್ಯ ಮಾತನಾಡಿ, ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಜ್ಞಾನದ ವ್ಯಾಪ್ತಿ ಹೆಚ್ಚಾಗುತ್ತದೆ. ಇಲ್ಲಿಯ ತನಕ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ 1,056 ಶಾಸನಗಳು ಪ್ರಕಟವಾಗಿವೆ. ಇನ್ನೂ ಸಾಕಷ್ಟು ಶಾಸನಗಳಿದ್ದು, ಅವುಗಳ ಸಂಶೋಧನೆ ಆಗಬೇಕಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಲಿಂಗಾಯತರು ಲಿಂಗ ಧರಿಸಿದರೆ ತೆರಿಗೆ ಕಟ್ಟಬೇಕಿತ್ತು. ಈ ಧರ್ಮ ವಿರೋಧಿ ನಿಲುವಿನಿಂದ ಸಾಕಷ್ಟು ಲಿಂಗಾಯತ ವೀರರು ದೆಹಲಿ ಸುಲ್ತಾನರ ಪರವಾಗಿ ನಿಂತಿದ್ದರಿಂದ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಸೋಲು ಅನುಭವಿಸಿತು. ಈ ಸೋಲಿಗೆ ಮುಖ್ಯ ಕಾರಣ ವಿಟ್ಟಪ್ಪ ಗೌಡ ದೇಸಾಯಿ ಪ್ರಮುಖ ಎಂಬುದನ್ನು ಇತಿಹಾಸ ಹೇಳುತ್ತದೆ. ಬಾಗಳಿಯ ಕಲ್ಲೇಶ್ವರ ದೇವಾಲಯ ಮತ್ತು ಮೈಲಾರಗಳು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಕ್ಕೆ ಶಿಕ್ಷೆ ವಿಧಿಸುವ ಅಂದಿನ ಕಾಲದ ಕೋರ್ಟ್‌ಗಳಾಗಿದ್ದವು. ಉಜ್ಜಿನಿ ಸದ್ದರ್ಮಪೀಠದಲ್ಲಿಯೂ ನ್ಯಾಯಾಲಯವಿತ್ತು. ಇಲ್ಲಿನ ತೀರ್ಪಿಗೆ ಬ್ರಿಟಿಷರು ಮನ್ನಣೆ ನೀಡಿ ಆದೇಶ ಪಾಲಿಸುವಂತೆ ಜನರಿಗೆ ತಿಳಿಸುತ್ತಿದ್ದರು ಎಂಬುದಕ್ಕೆ ಆನೇಕ ಆಧಾರಗಳಿವೆ ಎಂದರು.

ರಾಜ್ಯ ಪತ್ರಾಗಾರ ಇಲಾಖೆ ಉಪ ನಿರ್ದೇಶಕ ಡಾ. ಸದಾನಂದ ನೆಲ್ಕುದ್ರಿ, 18ನೇ ಶತಮಾನದಿಂದಲೂ ಚರಿತ್ರೆಗೆ ಸಂಬಂಧಿಸಿದ ದಾಖಲೆಗಳು ಪತ್ರಾಗಾರ ಇಲಾಖೆಯಲ್ಲಿ ಸಂರಕ್ಷಸಲಾಗಿದೆ. ಮೈಸೂರು ಅರಸರ ಶ್ರೀರಂಗಪಟ್ಟಣದ ಒಪ್ಪಂದ ಸೇರಿ ಅನೇಕ ದಾಖಲೆಗಳು ತಮ್ಮ ಇಲಾಖೆಯಲ್ಲಿವೆ. ತಾಳೆಗರಿಗಳು, ತಾಮ್ರದ ಪತ್ರಗಳು ನಿಮ್ಮಲ್ಲಿ ಇದ್ದರೆ ನಮ್ಮ ಇಲಾಖೆ ಗಮನಕ್ಕೆ ತಂದರೆ ಅವರ ಹೆಸರಿನಲ್ಲಿ ರಕ್ಷಿಸಲಾಗುತ್ತದೆ. ಮೈಸೂರು ಭಾಗದಲ್ಲಿ ಈ ಎಲ್ಲವನ್ನು ನಮ್ಮ ಇಲಾಖೆ ರಕ್ಷಿಸಿದೆ. ಆದರೆ ಮದ್ರಾಸ್, ಹೈದರಾಬಾದ್ ಪ್ರಾಂತ್ಯದಲ್ಲಿ ಈ ಕಾರ್ಯವಾಗಿಲ್ಲ ಎಂದರು. ಪ್ರಾಚಾರ್ಯ ಪ್ರಶಾಂತ ಕುಮಾರ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅಡಕಿ ಮಂಜುನಾಥ, ಎಸ್.ಎಂ. ಗುರುಪ್ರಸಾದ್, ಅವಂತಿ ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net