

ಕೊಟ್ಟೂರು: ಜನರಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸಲು ಕೊಟ್ಟೂರು ತಾಪಂನಿಂದ ನರೇಗಾ ಯೋಜನೆಯಡಿ ತಾಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಪೌಷ್ಟಿಕಾಂಶ ಬೆಳೆಗಳ ತೋಟಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಾಪಂ ಇಒ ಪರಮೇಶ್ವರಪ್ಪ ತಿಳಿಸಿದರು.
ತಾಪಂ ಕಚೇರಿಯಲ್ಲಿ ಫಲಾನುಭವಿಗಳಿಗೆ ಗುರುವಾರ ತೋಟಗಾರಿಕೆ ಇಲಾಖೆಯಿಂದ ಪೇರಲ, ನುಗ್ಗೆ, ನಿಂಬು, ಪಪ್ಪಾಯಿ, ನೆಲ್ಲಿಕಾಯಿ, ಕರಿಬೇವು, ತೆಂಗಿನ ಸಸಿಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಈ ಪೌಷ್ಟಿಕಾಂಶ ಕೈತೋಟ ನಿರ್ಮಿಸಲು ಫಲಾನುಭವಿಗೆ 5 ಸಾವಿರ ರೂ. ಪ್ರೋತ್ಸಾಹಧನವನ್ನು ಉದ್ಯೋಗ ಖಾತ್ರಿಯಡಿ ನೀಡಲಾಗುವುದು. ತಾಲೂಕಿನ 14 ಗ್ರಾಪಂಗಳಲ್ಲಿ 1014 ಪೌಷ್ಟಿಕ ತೋಟಗಳನ್ನು ಅನುಷ್ಠಾನಗೊಳ್ಳಬೇಕಿದ್ದು, ಇಲ್ಲಿತನಕ 579 ತೋಟಗಳು ಅನುಷ್ಠಾನಗೊಂಡಿವೆ ಎಂದು ಮಾಹಿತಿ ನೀಡಿದರು.
ಈ ಕೈತೋಟಗಳ ಅನುಷ್ಠಾನಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 4765 ಮಾನವ ದಿನಗಳು ಸೃಜನೆಗೊಂಡಿದ್ದು, 14.72 ಲಕ್ಷ ರೂ.ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಮನೆ ಮಾಲೀಕರು ತಮ್ಮ ಕೈತೋಟದಲ್ಲಿನ ತರಕಾರಿಯನ್ನು ಪ್ರತಿ ದಿನ ಉಪಯೋಗಿಸಬಹುದು ಎಂದರು.