ಕರೊನದಿಂದ ಬಳ್ಳಾರಿ-ವಿಜಯನಗರ ಜಿಲ್ಲೆಯ ಪಪೂ ಶಿಕ್ಷಣ ಪ್ರಗತಿ ಕುಸಿತ: ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಸುಗೇಂದ್ರ ಕಳವಳ

051122 Kotturu Educational conference and talent award ceremony
ಕೊಟ್ಟೂರಿನ ಇಂದು ಕಾಲೇಜ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕರ್ನಾಟಕ ರಾಜ್ಯ ಪಪೂ ಕಾಲೇಜ್‌ಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ಉದ್ಘಾಟಿಸಿದರು.
Published on

ಕೊಟ್ಟೂರು: ಕರೊನದಿಂದಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪಪೂ ಶಿಕ್ಷಣದ ಫಲಿತಾಂಶ ರಾಜ್ಯದಲ್ಲಿ 32ನೇ ಸ್ಥಾನಕ್ಕೆ ಕುಸಿದಿದ್ದು, ಇಂದಿನಿಂದಲೇ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಬೋಧನೆ ಮಾಡಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಳ್ಳಲು ಪ್ರಯತ್ನಿಸಬೇಕು ಎಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಸುಗೇಂದ್ರ ಉಪನ್ಯಾಸಕರಿಗೆ ಕರೆ ನೀಡಿದರು.

ಪಟ್ಟಣದ ಇಂದು ಕಾಲೇಜ್‌ನಲ್ಲಿ ಕೊಟ್ಟೂರು ತಾಲೂಕು ಪಪೂ ಕಾಲೇಜ್‌ಗಳ ಪ್ರಾಚಾರ್ಯರ ಸಂಘ ಮತ್ತು ಉಪನ್ಯಾಸಕರ ಸಂಘ ಹಾಗೂ ಪಪೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಸಮಾವೇಶವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಪಪೂ, ಕಾಲೇಜ್‌ಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ, ರಾಜ್ಯದಲ್ಲಿನ ಪಪೂ ಶಿಕ್ಷಣ ವ್ಯವಸ್ಥೆ ಇಡೀ ದೇಶ, ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಮತ್ತು ಗುಣಮಟ್ಟದಿಂದ ಕೂಡಿರುವುದಲ್ಲದೆ ಮಾದರಿಯಾಗಿದೆ. ಶಿಕ್ಷಣ ಇಲಾಖೆ ಇಂತಹ ಉನ್ನತ ಮಟ್ಟದ ಪಪೂ ಶಿಕ್ಷಣ ವ್ಯವಸ್ಥೆಗೆ 9 ಮತ್ತು 10ನೇ ತರಗತಿಯನ್ನು ಸೇರಿಸಲು ಸಿದ್ಧ್ದತೆ ನಡೆಸಿರುವುದರಿಂದ ಪಪೂ ಶಿಕ್ಷಣ ವ್ಯವಸ್ಥೆ ಕುಸಿಯುವುದಲ್ಲದೆ ಕನಿಷ್ಠ 30 ವರ್ಷಕ್ಕೆ ಹಿಂದಕ್ಕೆ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಇಲಾಖೆಯ ನಿರ್ಣಯಗಳನ್ನು ರಾಜ್ಯ ಪ್ರಾಚಾರ್ಯರ ಸಂಘ ಮತ್ತು ಉಪನ್ಯಾಸಕರ ಸಂಘ ವಿರೋಧಿಸುವುದಲ್ಲದೆ. ಇದರಿಂದ ಪಪೂ ಶಿಕ್ಷಣ ಇಲಾಖೆಗೆ ಆಗುತ್ತಿರುವ ಅನಾಹುತವನ್ನು ತಿಳಿಸಬೇಕಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಹಳೇ ಪಿಂಚಣಿ ಜಾರಿಗೆ ತರುವಂತೆ ಹೋರಾಟ ನಡೆಯುತ್ತಿದೆ. ಅನುದಾನ ರಹಿತ ಶಾಲೆಗಳು, ಅನುದಾನ ಕೊಡುವಂತೆ ಸರ್ಕಾರವನ್ನು ಕೇಳುತ್ತಿದ್ದು, ಹೀಗೆ ಅನೇಕ ಸಮಸ್ಯೆಗಳಿವೆ ಎಂದರು.

ಕರ್ನಾಟಕ ರಾಜ್ಯ ಪಪೂ, ಕಾಲೇಜ್‌ಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ, ಕರ್ನಾಟಕ ರಾಜ್ಯ ಪಪೂ ಕಾಲೇಜ್‌ಗಳ ಉಪನ್ಯಾಸಕರ ಸಂಘದ ಗೌರವ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾತನಾಡಿದರು. ಕೊಟ್ಟೂರು ತಾಲೂಕು ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ.ಜಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಪಪೂ, ಕಾಲೇಜ್‌ಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರಿದ್ದರು.

ತಾಲೂಕಿನ ವಿವಿಧ ಪಪೂ ಕಾಲೇಜ್‌ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜ್ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಸನ್ಮಾನಿಸಲಾಯಿತು. ಪ್ರಾಚಾರ್ಯ ನಿರ್ಮಿಲ ಶಿವನಗುತ್ತಿ ಪ್ರಾಸ್ತಾವಿಕ ಮಾತನಾಡಿದರು. ಇಂದು ಕಾಲೇಜ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವೀರಭದ್ರಪ್ಪ, ಡಿ.ಅಂಜಿನಪ್ಪ, ಆರ್.ಜಗದೀಶ ಚಂದ್ರಬೋಸ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net