

ಕುರುಗೋಡು: ವೀರಶೈವ ಮಠಗಳು ಜಾತಿ, ಮತ, ಪಂಥವಿಲ್ಲದೇ ಎಲ್ಲ ವರ್ಗದವರಿಗೆ ದಾಸೋಹ, ಶಿಕ್ಷಣ ನೀಡುವಲ್ಲಿ ಮುಂದಿವೆ ಎಂದು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಕೊಟ್ಟೂರುಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೇವಿ ಪುರಾಣ ಕಾರ್ಯಕ್ರಮದಲ್ಲಿ ಬುಧವಾರ ಸಾನಿಧ್ಯ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ವೀರಶೈವ ಮಠಗಳು ಸ್ಥಾಪನೆಗೊಂಡು ಪ್ರತಿಯೊಬ್ಬರಿಗೂ ಶಿಕ್ಷಣಕ್ಕೆ ಒತ್ತು ನೀಡಿವೆ ಎಂದರು.
ಈಗಾಗಲೇ ಕೊಟ್ಟೂರು ಮಠಗಳಲ್ಲಿ 15 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆ ಭಕ್ತರ ಸಹಕಾರವೇ ಕಾರಣ. ಈ ಹಿಂದೆ ಮಠಗಳಿಗೆ ಅನುದಾನ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿ ಭಕ್ತರು ಆಹಾರ ಧಾನ್ಯಗಳನ್ನು ನೀಡಿ ಸಹಕರಿಸುತಿದ್ದರು. ಇದರಿಂದ ಮಠ-ಮಂದಿರಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ ಎಂದರು.
ಹಿಂದಿನ ಕಾಲದಲ್ಲಿ ಬಹಳಷ್ಟು ಒಳ ಪಂಗಡಗಳ ಜಾತಿ ವ್ಯವಸ್ಥೆಯಿಂದ ಶೋಷಣೆಗೆ ಒಳಗಾದವು. ಆಗ ನೀರಾವರಿ ವ್ಯವಸ್ಥೆ ಇರಲಿಲ್ಲ. ಅಂದಿನ ಮೈಸೂರು ಅರಸರು ನೀರಾವರಿ ವ್ಯವಸ್ಥೆ ಕಲ್ಪಿಸಿದರು. ಈ ಹಿಂದೆ ಬಳ್ಳಾರಿ ವೀರಶೈವ ಸಂಘಕ್ಕೆ ಕೊಟ್ಟೂರು ಸ್ವಾಮೀಜಿಗಳು 460 ಎಕರೆ ಭೂಮಿಯನ್ನು ಸಾಮಾಜಿಕ ಸೇವೆಗೆ ನೀಡಿದ್ದರು ಎಂದು ತಿಳಿಸಿದರು.
ಕುರುಗೋಡು ಮಠದ ಉತ್ತರಾಧಿಕಾರಿ ನಿರಂಜನ ಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಿಗೂ ಸಮೃದ್ಧಿಯ ಜೀವನ ಲಭಿಸಲು ಪರಮಾತ್ಮನನ್ನು ನೆನದು, ಮಠ ಮಂದಿರಗಳಿಗೆ ಸೇವೆ ಸಲ್ಲಿಸಬೇಕಿದೆ.ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಜತೆಗೆ ಸಂಸ್ಕಾರವನ್ನು ಕಲ್ಪಿಸುತ್ತದೆ ಎಂದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಸುಮಂಗಳೆಯರ ಕಳಸ ಪೂರ್ಣಕುಂಭ, ಮೇಳದೊಂದಿಗೆ ಮೆರುಗು ತಂದರು. ಕೊಟ್ಟೂರು ಸ್ವಾಮಿ ಸೇವಾ ಬಳಗದ ಸದಸ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಪ್ರಮುಖರಾದ ಬಾದನಹಟ್ಟಿ ನಾಗನಗೌಡ, ಶೇಖರಯ್ಯ ಸ್ವಾಮಿ, ಪುರಾಣ ಸೇವಾ ಸಮಿತಿಯ ತೆಂಗಿ ಮಲ್ಲೇಶಪ್ಪ ಸೇರಿದಂತೆ ಯಲ್ಲಾಪುರ, ಗೆಣಿಕೆಹಾಳ್, ಬಾದನಹಟ್ಟಿ, ವದ್ದಟ್ಟಿ ಗ್ರಾಮಸ್ಥರು ಭಾಗವಹಿಸಿದ್ದರು. ಪುರಾಣ ಪ್ರವಚನವನ್ನು ಕಲಾವಿದ ಸಿದ್ದಲಿಂಗಯ್ಯ ಶಾಸ್ತ್ರೀ ನೆರೆವೇರಿಸಿದರು.