

ಪದಗ್ರಹಣ ಕಾರ್ಯಕ್ರಮದಲ್ಲಿ ಚುಸಾಪ ವಿಜಯನಗರ ಜಿಲ್ಲಾಧ್ಯಕ್ಷ ಎಲ್. ಹಾಲ್ಯನಾಯ್ಕ ವ್ಯಾಖ್ಯಾನ
ಕೊಟ್ಟೂರು: ಕೇವಲ ನಾಲ್ಕು ಸಾಲುಗಳಲ್ಲಿ ಓದುಗನ ಮನಮುಟ್ಟುವಂತೆ ವಿಷಯ ಹೆಣೆಯುವ ವೈಶಿಷ್ಟ್ಯ ಚುಟುಕು ಸಾಹಿತ್ಯಕ್ಕಿದ್ದು, ಕಪ್ಪೆ ಅರಭಟ್ಟನ ಶಾಸನದಲ್ಲಿ ಚುಟುಕು ಸಾಹಿತ್ಯ ರೂಪವಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾಧ್ಯಕ್ಷ ಎಲ್. ಹಾಲ್ಯನಾಯ್ಕ ಹೇಳಿದರು.
ಪಟ್ಟಣದ ಕೊಟ್ಟೂರೇಶ್ವರ ಕಾಲೇಜ್‌ನ ಡಾ.ರಾಜ್ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ವಿಜಯನಗರ ಚುಟುಕ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಪದಗ್ರಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದ ಮೇಲೆ ಕೊಟ್ಟೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಪದಗ್ರಹಣ ನಡೆಯುತ್ತಿರುವುದು ಹೆಮ್ಮೆ ತಂದಿದೆ. ಚುಟುಕು ಸಾಹಿತ್ಯ ಓದುಗರರಿಗೆ ನೀಡುವಷ್ಟು ಚಿಂತನೆ, ಖುಷಿ ಬೇರೆ ಸಾಹಿತ್ಯ ನೀಡುವುದಿಲ್ಲ ಎಂದರು.
ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕಿ ಕುಸುಮ ಸಜ್ಜನ್, ಚುಟುಕು ಸಾಹಿತ್ಯಕ್ಕೆ ಪ್ರೇರಣೆ ಜಾನಪದ ಸಾಹಿತ್ಯ. ತ್ರಿಪದಿಗಳೇ ತಂದೆ, ಸರ್ವಜ್ಞ, ಬಸವಣ್ಣನ ವಚನಗಳು ತಾಯಿ ಇದ್ದಂತೆ. ದಿನಕರ ದೇಸಾಯಿ ಅವರು ಚುಟುಕು ಬ್ರಹ್ಮ ಆಗಿದ್ದರೆ, ದುಂಡಿರಾಜ ಮಹಾರಾಜ ಎಂದರೆ ತಪ್ಪಿಲ್ಲ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ಗೊಲ್ಲರಹಳ್ಳಿ ಉಮ್ಮೇಶ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಚಂದ್ರಶೇಖರ ರೋಣದ ಮಠ, ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ಗೌರವ ಅಧ್ಯಕ್ಷ ಸಿ. ಕೊಟ್ರೇಶ ಇತರರು ಇದ್ದರು.