ಪೊಲೀಸ್ ಬಂದೋಬಸ್ತ್‌ನಲ್ಲಿ ಒಬ್ಬ ರೈತಗೆ ಎರಡು ಚೀಲ ಯೂರಿಯಾ ಗೊಬ್ಬರ ಮಾರಾಟ

12082020 Kottur Urea Fertilizer Sales
Published on

ಕೊಟ್ಟೂರು: ಪಟ್ಟಣದ ಗುರುಪ್ರಸಾದ್ ಟ್ರೇಡಿಂಗ್ ಕಂಪನಿಯಲ್ಲಿ ಬುಧವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಒಬ್ಬ ರೈತಗೆ ಎರಡು ಚೀಲದಂತೆ ಗೊಬ್ಬರ ಮಾರಾಟ ಮಾಡಲಾಯಿತು.


ಪಟ್ಟಣದಲ್ಲಿ 25 ಗೊಬ್ಬರದಂಗಡಿಗಳಿದ್ದರೂ ಗುರುಪ್ರಸಾದ್ ಟ್ರೇಡಿಂಗ್ ಕಂಪನಿಗೆ ಮಾತ್ರ 500 ಚೀಲ ಯೂರಿಯಾ ಬಂದಿತ್ತು. ಎಲ್ಲ ರೈತರಿಗೆ ಸಮನಾಗಿ ಹಾಗೂ ನಿಗದಿತ ಬೆಲೆಗೆ ಗೊಬ್ಬರ ದೊರೆಯಲಿ ಎಂಬ ದೃಷ್ಟಿಯಿಂದ ಕೃಷಿ ಅಧಿಕಾರಿ ಶ್ಯಾಂಸುಂದರ್, ಗುರುಪ್ರಸಾದ್ ಗೊಬ್ಬರದಂಗಡಿಯಲ್ಲಿ ಕುಳಿತು ರೈತರಿಗೆ ಯೂರಿಯಾವನ್ನು ಮಾರಾಟ ಮಾಡಿಸಿದರು.

ಸುತ್ತುಗಟ್ಟಿದ ರೈತರು: ಯೂರಿಯಾ ಖಾಲಿಯಾಗುತ್ತಿದ್ದಂತೆ ಕೃಷಿ ಅಧಿಕಾರಿ ಶ್ಯಾಂಸುಂದರ್‌ಗೆ ಸುತ್ತುವರಿದ ರೈತರು ಗೊಬ್ಬರವನ್ನು ತರಿಸಿಕೊಡುವಂತೆ ದುಬ್ಬಾಲು ಬಿದ್ದರು. ಕೆಲ ರೈತರು ಗೊಬ್ಬರ ತರಿಸಿಕೊಡುವ ತನಕ ಈ ಜಾಗಬಿಟ್ಟು ಕದಲುವುದಿಲ್ಲ ಎಂದು ಬಿಗುವಿನ ವಾತಾವರಣ ಮೂಡಿಸಿದರು. ಪರಿಸ್ಥಿತಿ ಅರಿತ ಸಹಾಯಕ ಸಬ್ ಇನ್ಸಫೆಕ್ಟರ್ ಗಂಗಾಧರಪ್ಪ ಮತ್ತು ಪೊಲೀಸ್ ಸಿಬ್ಬಂದಿ, ಕೃಷಿ ಅಧಿಕಾರಿ ಶ್ಯಾಂಸುಂದರರನ್ನು ಅಲ್ಲಿಂದ ಬೇರೆಡೆ ಕರೆದುಕೊಂಡು ಹೋದರು. ಕೆಲ ರೈತರು ಅಂಗಡಿಯೊಳಗೆ ಹೋಗಲು ಯತ್ನಿಸಿದಾಗ ಪೋಲೀಸರು ಅಡ್ಡನಿಂತು ತಡೆದರು.

ಹೊಲದ ಕೆಲಸ ಬಿಟ್ಟು, ಯೂರಿಯಾಕ್ಕಾಗಿ ವಾರದಿಂದ ಅಲೆದಾಡುತ್ತಿರುವೆ. ಕೃಷಿ ಅಧಿಕಾರಿ ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ ಎನ್ನುತ್ತಾರೆ. ರೈತರಿಗೆ ಯೂರಿಯಾ ಸಿಗದಿರುವ ಬಗ್ಗೆ ಶಾಸಕ ಭೀಮನಾಯ್ಕಗೆ ಗೊತ್ತಿದ್ದರೂ ಜಾಣ ಮೌನವಹಿಸಿದ್ದಾರೆ.| ಕೊಟ್ರೇಶಪ್ಪ ರೈತ ದೂಪದಹಳ್ಳಿ.ಕೊಟ್ಟೂರು ತಾಲೂಕಿನಲ್ಲಿ 10 ಸಾವಿರ ಹೆಕ್ಟರ್‌ಗೂ ಹೆಚ್ಚು ಭೂಮಿಯಲ್ಲಿ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಯೂರಿಯಾಕ್ಕೆ ಹೆಚ್ಚಿನ ಬೇಡಿಕೆ ಇದೆ. ನಾನೇ ಗೊಬ್ಬರದಂಗಡಿಯಲ್ಲಿ ಕುಳಿತು ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿಸಿದ್ದೇನೆ. ಈ ಕುರಿತು ಕೃಷಿ ಜೆಡಿ ಅವರಿಗೆ ಮಾಹಿತಿ ನೀಡಿದ್ದೇನೆ.| ಶ್ಯಾಂಸುಂದರ್ ಕೃಷಿ ಅಧಿಕಾರಿ ಕೊಟ್ಟೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net