ಕೊಳವೆಬಾವಿಗಳ ಮರುಪೂರಣಕ್ಕೆ ಅನುದಾನ

ktr-1
ಕೊಟ್ಟೂರು ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಕೊಳವೆಬಾವಿ ಮರುಪೂರಣ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಶಾಸಕ ಕೆ.ನೇಮಿರಾಜ ನಾಯ್ಕ ಉದ್ಘಾಟಿಸಿದರು. ಜಲತಜ್ಞ ಡಾ.ದೇವರಾಜ ರಡ್ಡಿ, ಮಲ್ಲಿಕಾರ್ಜುನ, ಇಕ್ರಾ ಸಂಸ್ಥೆ ಮುಖ್ಯಸ್ಥೆ ವಿ.ಗಾಯತ್ರಿ, ತಾಪಂ ಇಒ ಡಾ.ಆನಂದ ಕುಮಾರ ಇತರರಿದ್ದರು.
Published on

ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಂತರ್ಜಲ ಸಮಸ್ಯೆಯುಳ್ಳ ಕೊಳವೆಬಾವಿಗಳನ್ನು ಮರುಪೂರಣ ಮಾಡಲು ತಮ್ಮ ಅನುದಾನ ಮೀಸಲಿಡುವುದಾಗಿ ಶಾಸಕ ಕೆ.ನೇಮಿರಾಜ ನಾಯ್ಕ ವಾಗ್ದಾನ ಮಾಡಿದರು.

ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಐಸಿಆರ್‌ಎ ಸಂಸ್ಥೆ ನೇತೃತ್ವದ್ದಲ್ಲಿ ಸೋಮವಾರ ಆಯೋಜಿಸಿದ್ದ ಕೊಳವೆಬಾವಿ ಮರುಪೂರಣ ವಿಷಯ ಕುರಿತು ರೈತರ ಜತೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿಗೆ ಅನ್ನ ಕೊಡುವ ಅನ್ನದಾತ ರೈತ, ಅನ್ನದಾತನೇ ಕಷ್ಟಕ್ಕೀಡಾದರೆ ದೇಶವೇ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಈ ಹಿನ್ನೆಲೆ ಎಲ್ಲ ಬೋರ್‌ವೆಲ್‌ಗಳ ಸಮೀಕ್ಷೆ ಮಾಡಿ ವರದಿ ಕೊಡಿ, ನಿರ್ದಿಷ್ಟ ಅನುದಾನವನ್ನು ಮೀಸಲಿಡುವೆ. 2028ಕ್ಕೆ ಜಲ ಸಂರಕ್ಷಣೆಯಲ್ಲಿ ಈ ಕ್ಷೇತ್ರವನ್ನು ಮಾದರಿಯನ್ನಾಗಿಸುವೆ ಎಂದು ಭರವಸೆ ನೀಡಿದರು.

ಚಿತ್ರದುರ್ಗದ ಜಲತಜ್ಞ ಡಾ.ದೇವರಾಜ ರಡ್ಡಿ ಉಪನ್ಯಾಸ ನೀಡಿ, ಬೋರವೆಲ್‌ಗಳಲ್ಲಿ ನೀರು ಕಡಿಮೆಯಾದಾಗ ರೈತರು ಇನ್ನೊಂದು, ಮತ್ತೊಂದು ಬೋರ್‌ವೆಲ್ ಕೊರೆಸುತ್ತಾರೆ.

ಇದರಿಂದ ಭೂಮಿಯಲ್ಲಿನ ನೀರು ಬರಿದಾಗುತ್ತೆ ವಿನಃ ಸಂರಕ್ಷಣೆ ಆಗಲ್ಲ. ಅಂತರ್ಜಲ ಹೆಚ್ಚಳ ಹಾಗೂ ಜಲ ಸಂರಕ್ಷಣೆಗೆ ರೈತರು ಕೊಳವೆಬಾವಿಗಳಿಗೆ ಮಳೆ ನೀರು ಇಂಗಿಸುವ ಮರುಪೂರಣ ಕಾರ್ಯ ಕೈಗೊಳ್ಳಬೇಕು ಎಂದು ವಿವರಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಹಾಗೂ ಜಲತಜ್ಞ ಮಲ್ಲಿಕಾರ್ಜುನ, ಇಕ್ರಾ ಸಂಸ್ಥೆ ಮುಖ್ಯಸ್ಥೆ ವಿ.ಗಾಯತ್ರಿ ಮಾತನಾಡಿದರು. ತಾಪಂ ಇಒ ಡಾ.ಆನಂದ ಕುಮಾರ, ತಾಪಂ ಎಡಿ ವಿಜಯಕುಮಾರ್, ಭೂಮಿಮಿತ್ರ ಒಕ್ಕೂಟದ ಅಧ್ಯಕ್ಷ ಅಳವಂಡಿ ಕೊಟ್ರೇಶ, ರೈತರಾದ ನೀಲಕಂಠಪ್ಪ, ಚಂದ್ರಣ್ಣ, ಕೃಷಿ ಇಲಾಖೆ ರಾಕೇಶ, ಶ್ಯಾಮ್‌ಸುಂದರ್‌ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net