

ಕೊಟ್ಟೂರು: ತಾಲೂಕಿನ 14 ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆ.4ರಂದು ಮೊದಲ ಅವಧಿಯವರ ಅಧಿಕಾರ ಮುಗಿಯಲಿದ್ದು, ಯಾರಿಗೆ ಪಂಚಾಯಿತಿಗಳ ಹೊಣೆ ನೀಡಲಾಗುತ್ತದೆ ಎಂಬ ಚರ್ಚೆ ಶುರುವಾಗಿದೆ.
ಕೊಟ್ಟೂರು ತಾಲೂಕು ಹೊರತುಪಡಿಸಿ ವಿಜಯನಗರ ಜಿಲ್ಲೆಯಲ್ಲಿ ಎರಡನೇ ಅವಧಿಗೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದು ಅಧಿಕಾರ ಸ್ವೀಕರಿಸುತ್ತಿದ್ದಾರೆ. ಆದರೆ, ಹೈಕೋರ್ಟ್ ತಡೆಯಾಜ್ಞೆಯಿಂದಾಗಿ ತಾಲೂಕಿನ 14 ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಸುಂಟಿಕೊಪ್ಪ ಗ್ರಾಪಂ ಚುನಾವಣೆ 10ಕ್ಕೆ ಮುಂದೂಡಿಕೆ
ಚಿರಬಿ ಗ್ರಾಪಂ ಸದಸ್ಯ ಪಿ.ನಾಗರಾಜ, ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿರುವುದರಿಂದ 14 ಗ್ರಾಪಂ ಚುನಾವಣೆ ಮುಂದೂಡಲ್ಪಟ್ಟಿದೆ. ಈಗಾಗಲೇ ಮೂರು ವಿಚಾರಣೆ ಮುಗಿದಿದ್ದು, ಈ ಪ್ರಕರಣ ಯಾವಾಗ ಇತ್ಯರ್ಥವಾಗುತ್ತದೆಯೋ ಗೊತ್ತಿಲ್ಲ. ಅಲ್ಲಿಯ ತನಕ ಹಂಗಾಮಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರೇ ಅಧಿಕಾರದಲ್ಲಿ ಮುಂದುವರೆಯುತ್ತಾರೆಯೋ? ಇಲ್ಲವೆ ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಕವಾಗುತ್ತಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.
ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲು ಬರುವುದಿಲ್ಲ ಎನ್ನಲಾಗಿದೆ. ಹೀಗಾಗಿ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಧಿಕಾರ ನೀಡಿದಲ್ಲಿ, ಈಗಾಗಲೇ ಸದಸ್ಯರನ್ನು ಪ್ರವಾಸ ಕರೆದೊಯ್ದು ಹಣ ಖರ್ಚು ಮಾಡಿಕೊಂಡ ಆಕಾಂಕ್ಷಿಗಳಿಗೆ ಹಿನ್ನಡೆಯಾಗಲಿದೆ. ಚಿರಬಿ ಗ್ರಾಪಂ ತಡೆಯಾಜ್ಞೆ ಉಳಿದ ಪಂಚಾಯಿತಿಯವರಿಗೆ ಸಮಸ್ಯೆಯಾಗಿದೆ.
ಚಿರಬಿ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಈ ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಉಳಿದ ಪಂಚಾಯಿತಿಗಳಲ್ಲಿ ಹಾಲಿ ಅಧ್ಯಕ್ಷ-ಉಪಾಧ್ಯಕ್ಷರೇ ಮುಂದುವರೆಯುತ್ತಾರೆ.
| ಕೆ.ಪರಮೇಶ್ವರಪ್ಪ, ತಾಪಂ ಇಒ, ಕೊಟ್ಟೂರು