ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ 18 ರಂದು

16022020 kottur Fair
Published on

ಸುಕ್ಷೇತ್ರದತ್ತ ಮುಖ ಮಾಡಿದ ಭಕ್ತ ಗಣ | ನಾಳೆ ಕೃಷಿ ಮೇಳಕ್ಕೆ ಚಾಲನೆ

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಫೆ.18 ರಂದು ಜರುಗುವ ಹಿನ್ನೆಲೆಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಭಕ್ತ ಗಣ ಸುಕ್ಷೇತ್ರಕ್ಕೆ ಆಗಮಿಸುತ್ತಿದೆ.

ವರ್ಗ ವರ್ಣ ಬೇಧವಿಲ್ಲದೆ, ಪಾದಯಾತ್ರಿಗಳಿಗೆ ಪ್ರಸಾದ ನೀಡಿ ಮಾರ್ಗ ಮಧ್ಯೆದ ಗ್ರಾಮಸ್ಥರು ಪುನೀತರಾಗುತ್ತಿದ್ದಾರೆ. ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ತಹಸೀಲ್ದಾರ್ ಅನಿಲ್ ಕುಮಾರ್, ಪಪಂ ಮುಖ್ಯಾಧಿಕಾರಿ ಎಚ್.ಎಫ್, ಬಿದರಿ, ಸಿಬ್ಬಂದಿ ಶ್ರಮಿಸುತ್ತಿದೆ. ಪ್ರಥಮ ಬಾರಿಗೆ ಪಶು ಆಸ್ಪತ್ರೆ ಆವರಣದಲ್ಲಿ ಕೃಷಿ ಮೇಳ ಏರ್ಪಡಿಸಿದ್ದು, 20 ಮಳಿಗೆ ಹಾಕಲಾಗಿದೆ. ಫೆ. 17 ರಂದು ಚಾಲನೆ ನೀಡಲಾಗುತ್ತಿದೆ. ಸ್ಟಾಲ್‌ಗಳಿಗೆ ಆಗಮಿಸುವ ರೈತರಿಗೆ ಅಗತ್ಯ ಮಾಹಿತಿ ನೀಡಲು ಕೃಷಿ, ತೋಟಗಾರಿಕೆ, ಸಾಮಾಜಿಕ ಆರಣ್ಯ ಸೇರಿ ವಿವಿಧ ಇಲಾಖೆಗಳು ಸಿದ್ಧವಾಗಿವೆ.

ಕಲಾರಸಿಕರಿಗೆ ರಸದೌತಣ ಒದಗಿಸಲು ದಾವಣಗೆರೆಯ ಕೆ.ಬಿ.ಆರ್. ಡ್ರಾಮಾ ಕಂಪನಿ, ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘ, ಮಂಡಲಗಿರಿ ಶ್ರೀಗುರು ತೋಂಟದಾರ್ಯ ನಾಟ್ಯ ಸಂಘ, ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ ಝಗಮಗಿಸುವ ನಾಟಕದ ಟೆಂಟ್ ಹಾಕಿವೆ. ಈ ಹಿಂದೆ ಜಾತ್ರೆಯ ನಾಟಕ ಕಂಪನಿಗಳಲ್ಲಿ ವರನಟ ಡಾ.ರಾಜಕುಮಾರ್, ಪಂಡರಿಬಾಯಿ ಕಂಪನಿ ನಾಟಕಗಳಲ್ಲಿ ಅಭಿನಯಿಸಿದ್ದರು. ಮಕ್ಕಳಿಗೆ ಭರ್ಜರಿ ಮನೋರಂಜನೆ ಒದಗಿಸುವ ವಿವಿಧ ಎಕ್ಸಬಿಷನ್ ಹಾಕಲಾಗಿದೆ.

ಪಳಾರದ ಅಂಗಡಿಗಳಲ್ಲಿ ಕೊಟ್ಟೂರು ಮಂಡಕ್ಕಿ, ಖಾರ, ಡಾಣಿ, ಮೆಣಸಿನ ಕಾಯಿ ಬಜ್ಜಿ ಸೇರಿ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿದ್ದು, ಘಮ ಘಮಿಸುತ್ತಿವೆ. ಸ್ಥಳೀಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ, ಔಷಧ ವಿತರಣೆಗೆ ಸಿದ್ಧತೆ ಮಾಡಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net