

ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ 60 ಕೋಟಿ ರೂ. ಅನುದಾನ ನೀಡಿರುವುದಾಗಿ ಶಾಸಕ ನೇಮಿರಾಜ್ ನಾಯ್ಕ ಹೇಳಿದರು
ಪಟ್ಟಣದಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಡಿ.ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸತತ ಪರಿಶ್ರಮಪಟ್ಟು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಹೆತ್ತವರಿಗೆ, ಶಾಲೆಗೆ ಮತ್ತು ವಸತಿ ನಿಲಯಕ್ಕೆ ಕೀರ್ತಿ ತರಬೇಕು. ಕಾಲಹರಣ ಮಾಡದೆ. ಯಾವುದೇ ದುಶ್ಚಟಗಳಿಗೆ ದಾಸರಾಗದೆ ಸನ್ನಡತೆ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮಾತನಾಡಿ, ಹೆತ್ತವರಿಂದ ದೂರವಿದ್ದು, ವಸತಿ ನಿಲಯದಲ್ಲಿ ವ್ಯಾಸಂಗಕ್ಕೆ ಬಂದ ವಿದ್ಯಾರ್ಥಿಗಳಿಗೆ ನಿಲಯದ ಸಿಬ್ಬಂದಿ ಮಕ್ಕಳಂತೆ ಕಾಣಬೇಕೆಂದರು.
ತಾಲೂಕು ಕಲ್ಯಾಣ ಅಧಿಕಾರಿ ಶಾಮಪ್ಪ ಮಾತನಾಡಿ, ಕೊಟ್ಟೂರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಾಲ್ಕು ವಿದ್ಯಾರ್ಥಿ ನಿಲಯಗಳಿದ್ದು, ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದು, ಇಲಾಖೆಗೆ ಹೆಮ್ಮೆಯ ಸಂಗತಿ ಎಂದರು.
ಪಪಂ ಅಧ್ಯಕ್ಷೆ ಬದ್ದಿ ರೇಖಾ, ತಹಸೀಲ್ದಾರ್ ಜಿ.ಕೆ.ಅಮರೇಶ, ತಾಪಂ ಇಒ ಡಾ. ಆನಂದ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಕೊಟ್ರೇಶ ನಾಯ್ಕ, ತಾಲೂಕು ವಿಸ್ತರಣಾಧಿಕಾರಿ ಅಹಮ್ಮದ್ ಸಾಹೇಬ್, ಪ್ರಮುಖರಾದ ಕುಮಾರಸ್ವಾಮಿ, ಬಸವರಾಜ್, ಕುಬೇರ, ಶಿವಲೀಲಾ, ಮಲ್ಲಪ್ಪ, ರಾಚಪ್ಪ, ಎಸ್.ವಿ.ಸುಮಾ, ಸಹನ, ಕೊಟ್ರಮ್ಮ, ಶೃತಿ, ಎ.ಕೆ. ಪ್ರಕಾಶ ಇತರರಿದ್ದರು.