ಕೊಟ್ಟೂರಲ್ಲಿ ಕಂದಾಯ ಭೂಮಿ ಒತ್ತುವರಿ, ಮೂವರ ವಿರುದ್ಧ ಕೇಸ್; ಎಡಿಸಿ, ಎಸಿ, ತಹಸೀಲ್ದಾರ್ ಭೇಟಿ, ಪರಿಶೀಲನೆ

300420 Battanahalli Government land Occupied
Published on

ಕೊಟ್ಟೂರು: ತಾಲೂಕಿನ ಭತ್ತನಹಳ್ಳಿ ಗ್ರಾಮದಲ್ಲಿ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಸಾತವಾಡಿ ಕೊಟ್ರೇಶ, ಚಂದ್ರಪ್ಪ, ವೆಂಕಟೇಶ ವಿರುದ್ಧ ಪಟ್ಟಣ ಠಾಣೆಯಲ್ಲಿ ಬುಧವಾರ ಕೇಸ್ ದಾಖಲಿಸಲಾಗಿದೆ.

ಭತ್ತನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೇ ನಂ.584ರಲ್ಲಿನ 42 ಎಕರೆ ಸರ್ಕಾರಿ ಭೂಮಿ ಇದೆ. ಇದರಲ್ಲಿ ಕೆಲ ಭಾಗವನ್ನು ಈ ಮೂವರು ಸಾಗುವಳಿ ಮಾಡಲು ಮರಗಳನ್ನು ಕಡಿಸಿ ಸಮತಟ್ಟು ಮಾಡಿಕೊಂಡಿದ್ದರು. ಬುಧವಾರ ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹರಪನಹಳ್ಳಿ ಎಸಿ ಕೆ.ವಿ.ಪ್ರಸನ್ನ ಕುಮಾರ್, ಕೊಟ್ಟೂರು ತಹಸೀಲ್ದಾರ್ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದು ಮನದಟ್ಟಾಗಿದ್ದರಿಂದ ಮೂವರ ವಿರುದ್ಧ ಕೇಸ್ ದಾಖಲಿಸಲಾಯಿತು.

ತಹಸೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಸರ್ಕಾರಿ ಭೂಮಿಗೆ ಭತ್ತನಹಳ್ಳಿ ಗ್ರಾಮದ 22 ಜನರು ಭೂ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಮನವಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಂದಾಯ ಇಲಾಖೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವ ಚಿಂತನೆ ಇದೆ. ಈ ಸಂಬಂಧ ಕಂದಾಯ ಇಲಾಖೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುತ್ತಿದೆ. ಇಲ್ಲಿ ಅರಣ್ಯ ಇಲಾಖೆ ಗಿಡಮರ ಬೆಳೆಸಲು ಒಪ್ಪಿಕೊಂಡಿದೆ ಎಂದು ತಿಳಿಸಿದರು. ಪಿಎಸ್‌ಐ ಎ.ಕಾಳಿಂಗ, ಸರ್ವೇಯರ್ ಚನ್ನಬಸಪ್ಪ, ಕಂದಾಯ ನಿರೀಕ್ಷಕ ಹಾಲಸ್ವಾಮಿ, ವಿಎ ರಮೇಶ, ಆರ್‌ಎಫ್ ಮಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net