

ಕೊಟ್ಟೂರು: ಚಿರಬಿ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆ ಅಂಚಿನಲ್ಲಿರುವ 25ಕ್ಕೂ ಹೆಚ್ಚು ಅಡಿ ಆಳದ ಕೆಂಮ್ಮಣ್ಣುಗುಂಡಿ ಆಗಾಗ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದರೂ, ಇದಕ್ಕೆ ತಡೆಗೋಡೆ ನಿರ್ಮಿಸದಿರುವುದು ಆತಂಕ ಮೂಡಿಸಿದೆ.
ಕೆಲ ವರ್ಷಗಳ ಹಿಂದೆ ಚಿರಬಿ ಮೂಗಬಸವೇಶ್ವರ ಜಾತ್ರೆ ಮುಗಿಸಿಕೊಂಡು ಬರುವಾಗ ಎತ್ತಿನಬಂಡಿ ಇದೇ ಕೆಂಮ್ಮಣ್ಣು ಗುಂಡಿಯಲ್ಲಿ ಬಿದ್ದು, ಮೂವರು ಮೃತಪಟ್ಟಿದ್ದರು. ಆಗಾಗ ಮೀನು ಹಿಡಿಯಲು ಹೋದವರು, ಈಜಲು ಬಾರದವರು ಇಲ್ಲಿ ಬಲಿಯಾಗುತ್ತಲೇ ಇದ್ದಾರೆ.
ಈ ಮಾರ್ಗವಾಗಿ ಹಗಲು ರಾತ್ರಿ ಬಸ್, ಲಾರಿ, ಆಟೋ ರಿಕ್ಷಾ ಸಂಚರಿಸುತ್ತವೆ. ರಸ್ತೆ ಕೇವಲ ಒಂದೂವರೆ ಅಡಿ ದೂರದಲ್ಲಿ ಗುಂಡಿ ಇದೆ. ಕನಿಷ್ಠ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಲ್ಲುಗಳನ್ನು ನೆಟ್ಟಿಲ್ಲ. ಮೂರು ದಶಕಗಳಿಂದಲೂ ಹೀಗೆ ಇದೆ. ಎಂತಹ ಬೇಸಿಗೆ ಬರಗಾಲ ಬಂದರೂ ಸದಾ ನೀರು ಇಲ್ಲಿರುತ್ತದೆ. ಇತ್ತೀಚೆಗೆ ಮಳೆ ಅಧಿಕವಾಗಿರುವುದರಿಂದ ಸಂಪೂರ್ಣ ತುಂಬಿದೆ. ಇಲ್ಲಿ ಸಂಚರಿಸುವ ವಾಹನಗಳು ಆಯ ತಪ್ಪಿ ಗುಂಡಿಯಲ್ಲಿ ಬಿದ್ದರೆ ಸಾವು, ನೋವು ಖಚಿತ. ಈ ಮಾರ್ಗದ ರಸ್ತೆ ರಿಪೇರಿಯಾಗುತ್ತಿದ್ದು, ಲೋಕೋಪಯೊಗಿ ಇಲಾಖೆ ದೊಡ್ಡ ಪ್ರಮಾಣದಲ್ಲಿ ಅನಾಹುತವಾಗುವ ಮೊದಲು ಗುಂಡಿಗೆ ತಡೆಗೋಡೆ ನಿರ್ಮಿಸಬೇಕಿದೆ.
ಈ ಮಾರ್ಗದ ರಸ್ತೆ ದುರಸ್ತಿ ನಡೆಯುತ್ತಿದ್ದು, ಈ ಅಪಾಯದ ಗುಂಡಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಾಗಲಿ, ಇತರೆ ಅನುದಾನದಲ್ಲಿ ಸುಭದ್ರವಾದ ತಡೆಗೋಡೆ ನಿರ್ಮಿಸಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸುತ್ತೇವೆ.| ಖಾಜಾ ಸಾಹೇಬ್ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕೂಡ್ಲಿಗಿ