

ಕೊಟ್ಟೂರು : ಸರ್ಕಾರ ರಾಜ್ಯದ 1.63 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಉಳಿದ ಸರ್ಕಾರಿ ನೌಕರರಂತೆ ಸಮಾನ ರೀತಿಯಲ್ಲಿ ನೋಡಬೇಕು ಎಂದು ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನ ಗೌಡ ಒತ್ತಾಯಿಸಿದರು.
ಪಟ್ಟಣದ ತುಂಗಭದ್ರಾ ವಿದ್ಯಾಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಮತ್ತು ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಶೇ.25 ಪ್ರಾಥಮಿಕ ಶಾಲೆ ಶಿಕ್ಷಕರ ಕೊರತೆ ಇದೆ. ಆದರೆ, ಸರ್ಕಾರ ಹುದ್ದೆಗಳ ಭರ್ತಿ ಮಾಡುತ್ತಿಲ್ಲ. ಇದರಿಂದ ಇರುವ ಶಿಕ್ಷಕರ ಮೇಲೆ ಒತ್ತಡ ಹೆಚ್ಚುತ್ತಿದೆ. ಸರ್ಕಾರದ ತಾರತಮ್ಯ ನೀತಿಯಿಂದ ಶಿಕ್ಷಕರಿಗೆ ಬಡ್ತಿ ದೊರೆಯುತ್ತಿಲ್ಲ. ನಮ್ಮನ್ನು ಹೊರ ರಾಜ್ಯದವರಂತೆ ಪರಿಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವರ್ಗಾವಣೆ, ಉಳಿದ ಶಿಕ್ಷಕರಂತ ದೈಹಿಕ ಶಿಕ್ಷಣ ಶಿಕ್ಷಕರನ್ನು ಬಡ್ತಿಗೆ ಪರಿಗಣಿಸುವುದು, ಗ್ರಾಮೀಣ ಕೃಪಾಂಕ ಸೇರಿ ವಿವಿಧ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಬಿ.ಬಿ.ಶಿವಾನಂದ ಮಾತನಾಡಿ, ನಲಿಕಲಿ, ಜನಗಣತೆ ಸೇರಿದಂತೆ ಇತರ ಕೆಲಸಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮುಕ್ತಗೊಳಿಸಿ, ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ತಾಪಂ ಅಧ್ಯಕ್ಷ ಎಸ್.ಗುರುಮೂರ್ತಿ ಮಾತನಾಡಿ, ಏಪ್ರಿಲ್‌ನಲ್ಲಿ ಬಿಇಒ ಕಚೇರಿ ಸೇರಿ ಇತರ ಕಚೇರಿಗಳನ್ನು ಆರಂಭಿಸಲಾಗುವುದು. ಗುರುಭವನ ನಿರ್ಮಾಣಕ್ಕೆ 15ನೇ ಹಣಕಾಸು ಯೋಜನೆಯಲ್ಲಿ 10 ಲಕ್ಷ ರೂ. ಮೀಸಲಿಡಲಾಗುವುದು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಜಿಲ್ಲಾ ಅಧ್ಯಕ್ಷ ನಿಂಗಪ್ಪ ಮಾತನಾಡಿದರು.
ತಾಪಂ ಇಒ ಎಂ.ಬಾಬು, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜಮೀರ್ ಅಹ್ಮದ್, ಪ್ರಮುಖರಾದ ಪದ್ಮಲತಾ, ಬಸವರಾಜ್ ಸಂಗಪ್ಪ, ಸಂಘದ ತಾಲೂಕು ಅಧ್ಯಕ್ಷ ಅಣಜಿ ಸಿದ್ದಲಿಂಗಪ್ಪ, ಪದಾಧಿಕಾರಿಗಳಾದ ಕೆ.ಯುವರಾಜ್, ಅಂಬಳಿ ನಾಗೇಶಪ್ಪ ,ಕೆ.ಟಿ.ಸಿದ್ದರಾಮೇಶ್ವರ, ರೇವಣಸಿದ್ದಪ್ಪ, ಪಿ.ಎಚ್.ಎಂ.ಶೇಖರಯ್ಯ, ಲೋಕಪ್ಪ, ಸುನೀಲ್, ಗೀತಾ, ಚೌಡಪ್ಪ, ಶಿಕ್ಷಕರಾದ ಗೀತಾ, ಹನುಮಂತಪ್ಪ, ಮುತ್ತೇಶ್, ಮರುಳನಗೌಡ ಇತರರಿದ್ದರು.