ನ.9ರಂದು ಹೋರಾಟ ರೂಪಿಸಲು ಸಭೆ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಅಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆ

23102021 Kottur Valmiki unit open
Published on

ಕೊಟ್ಟೂರು: ಸಾಮಾಜಿಕ ಪರಿವರ್ತಕರು ಹಾಗೂ ಕಲ್ಯಾಣಕಾರರನ್ನು ಯಾವುದೇ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಅಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸರ್ಕಾರಿ ವಾಲ್ಮೀಕಿ ನೌಕರರ ಸಂಘದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು. ಬೇಟೆಯಾಡುವ ಮೂಲವೃತ್ತಿ ತ್ಯಜಿಸಿರುವ ವಾಲ್ಮೀಕಿ ಸಮುದಾಯ ಶೈಕ್ಷಣಿಕ ಅಭಿವೃದ್ಧಿಯತ್ತ ಮುಖಮಾಡಿದೆ. ಸರ್ವಸಮುದಾಯದೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು. ಸಮುದಾಯಕ್ಕೆ ಸರ್ಕಾರ ಶೇ.7.5 ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು. ಹೋರಾಟದ ರೂಪುರೇಷೆ ಕುರಿತು ನ.9ರಂದು ರಾಜನಹಳ್ಳಿ ಮಠದಲ್ಲಿ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕಲಬುರಗಿ ವಿಭಾಗೀಯ ಸರ್ಕಾರಿ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಮಾನಪ್ಪ ನಾಯಕ, ವಿಜಯನಗರ ಜಿಲ್ಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಬಳ್ಳಾರಿ ಜಿಲ್ಲಾ ವಾಲ್ಮೀಕಿ ನೌಕರರ ಸಂಘದ ಕಾರ್ಯದರ್ಶಿ ಕೆಂಚಪ್ಪ, ರಮೇಶ ಕುಮಾರ ವಾಲ್ಮೀಕಿ ಮಾತನಾಡಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ರಾಮಣ್ಣ, ಸದಸ್ಯೆ ಅಂಜಿನಮ್ಮ, ವಕೀಲ ಉಚ್ಚೆಂಗಪ್ಪ, ವರ್ತಕ ಕೇಶವ, ಕೂಡ್ಲಿಗಿ ಸರ್ಕಾರಿ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ತಳವಾರ ಶರಣಪ್ಪ. ಕೊಟ್ಟೂರು ತಾಲೂಕು ಅಧ್ಯಕ್ಷ ಬಿ.ಪಿ.ಮಂಜುನಾಥ ಇತರರಿದ್ದರು. ಇದಕ್ಕೂ ಮುನ್ನ ಬೈಕ್ ರ‌್ಯಾಲಿ ನಡೆಸಲಾಯಿತು. ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಶ್ರೀಗಳು ದರ್ಶನಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net