

ಕೊಟ್ಟೂರು: ಪಟ್ಟಣದ ಮರೂರು ಕನ್ನಾನಾಯಕನಕಟ್ಟೆ ಮಾರ್ಗದ ನಡುವೆ ಇರುವ 100 ಕೆ.ವಿ. ವಿದ್ಯುತ್ ಪರಿವರ್ತಕಕ್ಕೆ ಆಕಸ್ಮಿಕವಾಗಿ ಸಿಲುಕಿ ನವಿಲು ಸತ್ತಿದೆ. ನವಿಲು ಸತ್ತಿರುವುದನ್ನು ಗಮನಿಸಿದ ವಾತ್ಸಲ್ಯ ಧಾಮ ಫಾರ್ಮ್‌ಹೌಸ್‌ನ ಮಾಲೀಕ ಶಶಿಧರ ಸತ್ತ ನವಿಲನ್ನು ಅಲ್ಲಿಯೇ ಗುಂಡಿತೋಡಿ ಮುಚ್ಚಿದ್ದಾರೆ. ಅರಣ್ಯದಲ್ಲಿ ನವಿಲುಗಳಿಗೆ ಆಹಾರ ಕಡಿಮೆಯಾದ ಕಾರಣ ಕೊಟ್ಟೂರು ತಾಲೂಕಿನ ಹೊಲ, ತೋಟಗಳಲ್ಲಿ ಹಿಂಡು ಹಿಂಡಾಗಿ ಬಂದು ವಾಸಿಸುತ್ತಿವೆ. ತೋಟಗಳಿಗೆ ಬಂದು ನೀರು ಕುಡಿಯುತ್ತವೆ.
ಆಗಾಗ ವಿದ್ಯುತ್ ಪರಿವರ್ತಕಗಳಿಗೆ ನವಿಲು ಸಿಕ್ಕು ಸಾಯುವುದು ಸಾಮಾನ್ಯವಾಗಿಬಿಟ್ಟಿದೆ. ಬೇಟೆಗಾರರೂ ಭೇಟೆಯಾಡುತ್ತಾರೆ. ಈ ಸಂಗತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ ಮೌನವಾಹಿಸಿದ್ದಾರೆ ಎಂಬುದು ಇಲ್ಲಿನ ಪಕ್ಷಿಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.