

ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲ್ ತಟ್ಟೆಗಳ ಹಾವಳಿ | ಪ್ರಯಾಣಿಕರಿಗೆ ಕಿರಿಕಿರಿ
ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಜರುಗಿ ಎಂಟು ದಿನಗಳು ಕಳೆದರೂ, ಭಕ್ತರು ಎಲ್ಲೆಂದರಲ್ಲಿ ಎಸೆದ ಕಸ ಜಾಗ ಬಿಟ್ಟಿಲ್ಲ. ಹೀಗಾಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳ ಬದಿ ಊಟದ ಪೇಪರ್ ಪ್ಲೇಟ್, ಟೀ ಕಪ್, ನೀರಿನ ಬಾಟಲ್ ರಾಶಿ ರಾಶಿ ಬಿದ್ದಿವೆ.
ದಾವಣಗೆರೆ, ಹರಪನಹಳ್ಳಿ, ಕೂಡ್ಲಿಗಿ, ಜಗಳೂರು, ಇಟಗಿ, ಹಗರಿಬೊಮ್ಮನಹಳ್ಳಿ, ಶಿರಬಿ ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯ ತಿಪ್ಪೆಯಂತೆ ಕಾಣುತ್ತಿವೆ. ವಿವಿಧೆಡೆಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಪಾದಯಾತ್ರಿಗಳಿಗೆ ಸ್ಥಳೀಯರು ಪ್ಲಾಸ್ಟಿಕ್ ಬದಲು ಪೇಪರ್ ಪ್ಲೇಟ್, ಗ್ಲಾಸ್‌ಗಳಲ್ಲಿ ತಿಂಡಿ, ಊಟ, ಹಣ್ಣಿನ ರಸ, ಮಜ್ಜಿಗೆ, ಕುಡಿವ ನೀರು ವಿತರಿಸಿದ್ದರಿಂದ ಪ್ಲಾಸ್ಟಿಕ್ ಸಮಸ್ಯೆಯಿಂದ ಇಡೀ ಪರಿಸರ ಪಾರಾಗಿದೆ.
ಆದರೆ, ಕಿಮೀ ಗಟ್ಟಲೇ ಬಿದ್ದಿರುವ ಮೂಟೆಗಟ್ಟಲೆ ತ್ಯಾಜ್ಯವನ್ನು ಯಾರು ತೆರವುಗೊಳಿಸಬೇಕು? ಊರೊಳಗಾದರೆ ಗ್ರಾಪಂ ಸಿಬ್ಬಂದಿ, ಪಟ್ಟಣದಲ್ಲಿಗಿದ್ದರೆ, ಪಪಂ ಸಿಬ್ಬಂದಿ ಕಸ ತೆರವುಗೊಳಿಸುತ್ತಿದ್ದರು. ಊರ ಹೊರಗೆ ಕಸ ಬಿದ್ದಿರುವುದರಿಂದ ಯಾರು ಸ್ವಚ್ಛಗೊಳಿಸುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಪೇಪರ್ ಪ್ಲೇಟ್, ಗ್ಲಾಸ್‌ಗಳು ಬಿಸಿಲಿಗೆ ಒಣಗಿ, ಗಾಳಿಗೆ ಹಾರಿ ಹೋಗಿ, ಪ್ರಯಾಣಿಕರ ಮುಖಕ್ಕೆ ಬಡಿಯುತ್ತಿವೆ. ಪೇಪರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಜಾನುವಾರು ಸೇವಿಸಿದರೆ, ಅವುಗಳ ಆರೋಗ್ಯ ಹದಗೆಡುತ್ತದೆ. ಮುಂದಿನ ವರ್ಷ ಪಾದಯಾತ್ರಿಗಳಿಗೆ ಪ್ರಸಾದ, ನೀರು, ಹಣ್ಣಿನ ಜ್ಯೂಸ್ ವಿತರಿಸುವವರು ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡುವವರು ಮತ್ತು ಸಂಘಟಕರು ಮುಂಜಾಗ್ರತೆವಹಿಸಿ ಊಟ, ಉಪಾಹಾರದ ಪ್ಲೇಟ್, ಚಹಾ, ಕಾಫಿ ಕಪ್ ಮತ್ತು ನೀರಿನ ಬಾಟಲ್ಗಳನ್ನು ಸಂಗ್ರಹಿಸಿದ್ದರೆ, ಸಮಸ್ಯೆಯಾಗುತ್ತಿರಲಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ತೆರವುಗೊಳಿಸುವಂತೆ ಆದೇಶಿಸುತ್ತೇನೆ.| ಬಸಣ್ಣ ಇಒ, ತಾಪಂ ಕೊಟ್ಟೂರು-ಕೂಡ್ಲಿಗಿ