

ಕೊಟ್ಟೂರು: ಇಲ್ಲಿನ ಪಪಂಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಅಧ್ಯಕ್ಷೆ ಸ್ಥಾನ ಅಲಂಕರಿಸಿರುವ ಭಾರತಿ ಅವರ ಪತಿ ಸುಧಾಕರ ಪಾಟೀಲ್ ಸೋಮವಾರ ಬಿಜೆಪಿ ಸೇರಿದ್ದರಿಂದ ಅಧ್ಯಕ್ಷರು ತಮ್ಮ ಮುಂದಿನ ನಡೆ ಬಹಿರಂಗಪಡಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾರುಕೇಶ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಧ್ಯಕ್ಷರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಕಾಂಗ್ರೆಸ್ ಚಿಹ್ನೆಯಿಂದ ಗೆದ್ದಿದ್ದಾರೆ. ಪಕ್ಷದ ಬಗ್ಗೆ ಸಹಮತವಿಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಮ್ಮೆ ಆಯ್ಕೆಯಾಗಿ ಬರಲಿ ಎಂದು ಸಾವಲು ಹಾಕಿದರು.
ಪತಿ-ಪತ್ನಿ ಬೇರೆಬೇರೆ ಪಕ್ಷದಲ್ಲಿದ್ದುಕೊಂಡು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಈ ಡ್ರಾಮಾ ಎಲ್ಲರಿಗೂ ಅರ್ಥವಾಗುತ್ತದೆ. ಪತಿಯ ನಿರ್ಧಾರಕ್ಕೆ ಪತ್ನಿಯೂ ಸಹಮತ ವ್ಯಕ್ತಪಡಿಸುವುದಾದರೆ ಪಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಈ ಕುರಿತು ಮಾಹಿತಿ ಕೇಳಿದ್ದು, ಕೂಡಲೇ ನೀಡುತ್ತೇನೆ. ಪಪಂ ಅಧ್ಯಕ್ಷೆ ಭಾರತಿ ವಿರುದ್ಧ ಪಕ್ಷದಿಂದ ಕ್ರಮ ಕೈಗೊಳ್ಳುವ ಜತೆಗೆ ನೋಟಿಸ್ ಸಹ ನೀಡಲಾಗುವುದು ಎಂದರು.
ಭಾರತಿ ಅವರ ಬದಲಾಗಿ ಪತಿ ಸುಧಾಕರ ಅವರೇ ಆಡಳಿತ ನಡೆಸಿದ್ದು ಕೊಟ್ಟೂರು ಜನತೆಗೆ ಗೊತ್ತಿದೆ. ಅನೇಕ ಸಮಾರಂಭಗಳಲ್ಲಿ ಸುಧಾಕರ ಅವರು, ಪತ್ನಿಗೆ ಮಾತನಾಡಲು ಬರುವುದಿಲ್ಲವೆಂದು ವೇದಿಕೆಯೇರಿ ಭಾಷಣ ಮಾಡಿದ್ದನ್ನು ಜನ ನೋಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ, ಪಪಂ ಉಪಾಧ್ಯಕ್ಷ ಶಫಿ, ಎಸ್.ಸಿ. ಘಟಕದ ತಾಲೂಕು ಅಧ್ಯಕ್ಷ ಪರಶುರಾಮ್, ಕಾಂಗ್ರೆಸ್ ಯುವ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗೌಡ, ಹೊನ್ನೂರು ಸಾಹೇಬ್, ಎಂ.ಎಂ. ಉಮಾಪತಿ, ಕಾಸಲ ಪ್ರಕಾಶ, ಬಡಿಗೇರ್ ಕೊಟ್ರೇಶ, ಮಲ್ಲಿಕಾರ್ಜುನ, ಕನ್ನಳ್ಳಿ ಮಲ್ಲಿಕಾರ್ಜುನ, ಪಪಂ ಮಾಜಿ ಸದಸ್ಯ ಪೂಜಾರ್ ನಾಗಪ್ಪ, ಅಡಕಿ ಮಂಜುನಾಥ್, ಕೆಂಪಳ್ಳಿ ಗುರುಸಿದ್ದನಗೌಡ, ಸತೀಶ, ಕಾರ್ತೀಕ್ ಇತರರಿದ್ದರು.