

ಕೊಟ್ಟೂರು: ಎರಡು ಕಡೆ ಸ್ವಾತಂತ್ರೊೃೀತ್ಸವ ಆಚರಣೆ ಭಾಗ್ಯ ನನಗೆ ದೊರೆತಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಬಹುಶಃ ಶಾಸಕರು ಎರಡು ಕಡೆ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವಿಲ್ಲ. ಆದರೆ ಹಗರಿಬೊಮ್ಮನಹಳ್ಳಿ ಮತ್ತು ಕೊಟ್ಟೂರು ಎರಡು ಕಡೆ ಆಚರಣೆ ಮಾಡುವ ಅವಕಾಶ ನನಗಿದೆ. ಮೊದಲು ಕೊಟ್ಟೂರು, ನಂತರ ಹಗರಿಬೊಮ್ಮನಹಳ್ಳಿಯಲ್ಲಿ ಆಚರಣೆಯಲ್ಲಿ ಭಾಗಿಯಾಗಲಾಗುವುದು. ಸಮಯ ಪಾಲನೆ ಮಾಡಲು ಹೆಲಿಕಾಪ್ಟರ್ ಬಳಕೆ ಮಾಡುವುದಿಲ್ಲ. ರಸ್ತೆ ಪ್ರಯಾಣ ಮಾಡಿ ಸ್ವಾತಂತ್ರೊೃೀತ್ಸವದ ಧ್ವಜಾರೋಹಣ ಮಾಡಲಾಗುವುದು ಎಂದು ತಿಳಿಸಿದರು.
ಆಪರೇಷನ್ ಸಿಂಧೂರದಲ್ಲಿ ಸೈನಿಕರ ಪರಾಕ್ರಮ, ವೀರಾವೇಶದ ಹೋರಾಡಿದ ಹಿನ್ನೆಲೆಯಲ್ಲಿ ಪ್ರತಿ ಶಾಲೆ ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಆ.14, 15 ರಂದು ವಿದ್ಯುತ್ ದೀಪಾಲಂಕಾರ ಮಾಡಬೇಕು. ನಿವೃತ್ತ ಸೈನಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಬ್ಬೊಬ್ಬ ಸಾಧಕರನ್ನು ಸನ್ಮಾನಿಸಲು ಅರ್ಹರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿಯುವ ತನಕ ಎಲ್ಲ ಇಲಾಖೆ ಆಧಿಕಾರಿಗಳು ಹಾಜರಿರಬೇಕು. ಅಧಿಕಾರಿಗಳ ಬದಲಾಗಿ ಅಧೀನ ಅಧಿಕಾರಿಗಳನ್ನು ಕಳುಹಿಸಿದರೆ, ಕಾರ್ಯಕ್ರಮ ಮುಗಿಯುವ ಮೊದಲೇ ಹೊರಟು ಹೋದರೆ, ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ತಹಸೀಲ್ದಾರ್ ಜಿ.ಕೆ.ಅಮರೇಶ ಅಧ್ಯಕ್ಷತೆ ವಹಿಸಿದ್ದರು.