ಲಾಕ್‌ಡೌನ್ ಮುಂದುವರಿಸಲು ಸಿಎಂಗೆ ಪತ್ರ; ಶಾಸಕ ಎಸ್.ಭೀಮನಾಯ್ಕ ಹೇಳಿಕೆ

07042020 Kottur MLA S Bhimanayaka meeting
Published on

ಕೊಟ್ಟೂರು: ಕರೊನಾ ಸಂಪೂರ್ಣ ನಿಯಂತ್ರಿಸಲು ಲಾಕ್‌ಡೌನ್ ಮುಂದುವರಿಸುವ ಅಗತ್ಯವಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆಯುವುದಾಗಿ ಶಾಸಕ ಎಸ್.ಭೀಮನಾಯ್ಕ ಹೇಳಿದರು.

ಇಲ್ಲಿನ ಹರಿಪ್ರಿಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೊಟ್ಟೂರೇಶ್ವರ ಸ್ವಾಮಿ ಕೃಪೆಯಿಂದ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿಲ್ಲ. ಬುಧವಾರದಿಂದ ಬೈಕ್‌ಗಳು ರಸ್ತೆಗಿಳಿದರೆ ಕೇಸ್ ಹಾಕಬೇಕು. ಅಲ್ಲದೆ ಬೈಕ್ ಸವಾರರಿಗೆ ಪೆಟ್ರೋಲ್ ಹಾಕಿದ ಬಂಕ್‌ಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ತರಕಾರಿ ಮಾರಾಟ ಮಾಡುವವರ ವಿರುದ್ಧ ಕೇಸ್ ಹಾಕಿ ಎಂದು ಪೊಲೀಸರಿಗೆ ಸೂಚಿಸಿದ ಶಾಸಕರು, ಪ್ರತಿ ವಾರ್ಡ್‌ಗೆ ತಳ್ಳುವ ಗಾಡಿ, ವಾಹನಗಳಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಆದೇಶಿಸಿದರು.

ಖಾಸಗಿ ಕ್ಲಿನಿಕ್‌ಗಳು ತೆರೆದಿರಬೇಕು. ವೈದ್ಯರ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಪಟ್ಟಣದಲ್ಲಿ ಪ್ರಮುಖ ಎರಡು ಔಷಧ ಅಂಗಡಿಗಳು 24 ಗಂಟೆ ಕಾರ್ಯನಿರ್ವಹಿಸುವಂತೆ ಆದೇಶ ನೀಡುವಂತೆ ಟಿಎಚ್‌ಒ ಷಣ್ಮುಖನಾಯ್ಕಗೆ ತಾಕೀತು ಮಾಡಿದರು.

ಕೋಳಿ, ಕುರಿ, ಮೀನು ಮಾಂಸ ಮಾರಾಟ ಮಳಿಗೆಗಳನ್ನು ತಹಸೀಲ್ದಾರ್ ಪರಿಶೀಲಿಸಿದ ಬಳಿಕವಷ್ಟೇ ಮಾರಾಟಕ್ಕೆ ಅವಕಾಶ ನೀಡಬೇಕು. ಕ್ಷೇತ್ರದಲ್ಲಿ ಒಂದು ಲಕ್ಷ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸುವ ಚಿಂತನೆ ಇದೆ. ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕಾರಣ ಮಾಸ್ಕ್ ದೊರೆತ ತಕ್ಷಣ ಹಂಚಿಕೆ ಮಾಡಲಾಗುವುದು. ನ್ಯಾಯಬೆಲೆ ಅಂಗಡಿಯವರು ಸರ್ಕಾರದ ಆದೇಶದಂತೆ ಅಕ್ಕಿ, ಗೋಧಿ ವಿತರಿಸಬೇಕು, ಲೋಪದೋಷ ಕಂಡುಬಂದರೆ ಅಂಗಡಿ ವಿರುದ್ಧ ಕೇಸ್ ದಾಖಲಿಸಿ ಎಂದು ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಸೂಚಿಸಿದರು. ತಾಪಂ ಇಒ ಬಸಣ್ಣ, ಜಿಪಂ ಸದಸ್ಯ ಹರ್ಷವರ್ಧನ್ ಹಾಗೂ ಗ್ರಾಪಂ ಪಿಡಿಒಗಳು, ವಿಎಗಳು, ಪಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net