

ಕೊಟ್ಟೂರು: ಇಲ್ಲಿನ ಕೊಟ್ಟೂರೇಶ್ವರ ಪದವಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ಎಂಟತ್ತು ವಿದ್ಯಾರ್ಥಿಗಳ ಪ್ರವೇಶವನ್ನು ಪ್ರಾಚಾರ್ಯ ಡಿ.ರವೀಂದ್ರ ಗೌಡ ಸೋಮವಾರ ನಿರಾಕರಿಸಿದರು.
ಹಿಜಾಬ್ ಧರಿಸಿದ ಕಾಲೇಜಿನ ಒಳಗೆ ಇರುವವರನ್ನು ಹೊರಗೆ ಕಳುಹಿಸಿ ಎಂದು ಪ್ರಾಚಾರ್ಯರ ಜತೆ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು. ನಂತರ ಪತ್ರಕರ್ತರ ಜತೆ ಮಾತನಾಡಿದ ಪ್ರಾಚಾರ್ಯ, ಮಂಗಳವಾರದಿಂದ ಎಲ್ಲರೂ ಸಮವಸ್ತ್ರ ಧರಿಸಿದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದರು. ಇದೇ ಸಂದರ್ಭ ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ನಾನು ಮೊದಲಿಂದಲೂ ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿದ್ದೇನೆಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ಬಗ್ಗೆ ಮಾತನಾಡಿರುವ ಕಾಲೇಜಿನ ಅಧ್ಯಕ್ಷ ಸಿದ್ದರಾಮ ಕಲ್ಮಠ, ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ಬರಬೇಕು. ಇದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.