

ಕೊಟ್ಟೂರು: ಹೊಲ, ತೋಟ, ಕಣಗಳಲ್ಲಿ ಸಹಜವಾಗಿ ಬೆಳೆದ ಬೇವಿನಮರಗಳಿಂದ ನೆಲಕ್ಕೆ ಬೀಳುವ ಬೀಜಗಳಿಗೂ ಬೇಡಿಕೆ ಬಂದಿದ್ದು, ಕೋಗಳಿ ಗ್ರಾಮದ ಮಹಿಳೆಯರು ನಿತ್ಯ ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ಆರ್ಥಿಕ ದಾರಿ ಕಂಡುಕೊಂಡಿದ್ದಾರೆ.
ಮೇ, ಜೂನ್, ಜುಲೈ ತಿಂಗಳಲ್ಲಿ ಬೇವಿನಮರದ ಹಣ್ಣುಗಳು ನೆಲಕ್ಕೆ ಉದುರುತ್ತವೆ. ಕೋಗಳಿ ಗ್ರಾಮದ ಸುತ್ತಮುತ್ತ ಅಧಿಕ ಸಂಖ್ಯೆಯಲ್ಲಿ ಬೇವಿನಮರಗಳಿದ್ದು, ಅಂದಾಜು 30 ಕುಟುಂಬಗಳ ಬದುಕಿಗೆ ಆಸರೆಯಾಗಿವೆ. ಬೇವಿನಮರಗಳಿರುವ ಹೊಲ, ಕಣ, ತೋಟಗಳಿಗೆ ತೆರಳುವ ಮಹಿಳೆಯರು, ನೆಲಕ್ಕೆ ಬಿದ್ದ ಬೇವಿನ ಬೀಜಗಳನ್ನು ಸಂಗ್ರಹಿಸಿ ತರುತ್ತಾರೆ. ಅವುಗಳನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸುತ್ತಾರೆ.
ಬಳಿಕ ಬೀಜಗಳನ್ನು ಚೀಲದಲ್ಲಿ ಸಂಗ್ರಹಿಸಿ ಕ್ವಿಂಟಾಲ್‌ಗೆ ಒಂದು ಸಾವಿರ ರೂ.ಯಿಂದ ಹನ್ನೊಂದು ನೂರು ರೂ.ವರೆಗೆ ಮಾರಾಟ ಮಾಡುತ್ತಾರೆ. ಬೀಜ ಖರೀದಿಸಲು ಕೊಟ್ಟೂರು ಮತ್ತು ಹಗರಿಬೊಮ್ಮನಹಳ್ಳಿಯಿಂದ ವ್ಯಾಪಾರಿಗಳು ಬರುತ್ತಾರೆ. ಅವರು ಔಷಧ ಗುಣ ಹೊಂದಿರುವ ಬೇವಿನ ಬೀಜಗಳನ್ನು ಔಷಧ ತಯಾರಿಕಾ ಕಂಪನಿಗಳಿಗೆ ಸರಬರಾಜು ಮಾಡುತ್ತಾರೆ.
ಬೇವಿನಬೀಜ ಸಂಗ್ರಹದಿಂದ ಒಬ್ಬ ವ್ಯಕ್ತಿ 100-150 ರೂ. ತನಕ ದುಡಿಯುತ್ತಾನೆ. ಇದು ಬೆಳಗಿನ ಎರಡ್ಮೂರು ಗಂಟೆ ಕೆಲಸ ಮಾತ್ರ. ಮಳೆ, ಗಾಳಿ ಬೀಸಿದರೆ ಬೇವಿನಬೀಜವನ್ನು ಸಂಗ್ರಹಿಸಿವುದು ಕಷ್ಟ. ನೀರಲ್ಲಿ ಹರಿದುಹೋಗುತ್ತದೆ.
ಈ ಭಾಗದಲ್ಲಿ ಮಳೆ ಇಲ್ಲದ ಕಾರಣ ಬೇವಿನಬೀಜಕ್ಕೆ ಬೇಡಿಕೆ ಉಂಟಾಗಿದೆ. ಕೋಗಳಿ ಗ್ರಾಮದಲ್ಲಿ ಬೇವಿನಬೀಜ ಸಂಗ್ರಹಿಸುವವರ ಮನೆ ಮುಂದೆ ಹತ್ತರಿಂದ ಹದಿನೈದು ಚೀಲಗಳನ್ನು ಕಾಣಬಹುದು. ಮಳೆ, ಗಾಳಿಗೆ ವ್ಯರ್ಥವಾಗುತ್ತಿದ್ದ ಬೇವಿನಬೀಜಕ್ಕೆ ಈ ಭಾಗದಲ್ಲಿ ಬೇಡಿಕೆ ಹೆಚ್ಚಿದೆ.
ನಮಗೆ ಹೊಲ ಇಲ್ಲ, ಕೂಲಿ ಮಾಡಿಕೊಂಡು ಬದುಕಬೇಕು. ಈಗ ಮಳೆಯೂ ಬಂದಿಲ್ಲ. ಈ ಮೂರು ತಿಂಗಳು ಬೇವಿನಬೀಜ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದು, ಜೀವನಕ್ಕೆ ಆಸರೆಯಾಗಿದೆ ಎನ್ನುತ್ತಾರೆ ದಿಬ್ಬದಹಳ್ಳಿ ಮಾದಮ್ಮ, ನಾಗಮ್ಮ, ಪಕ್ಕೀರಮ್ಮ, ಇಂದ್ರಮ್ಮ, ಕೊಟ್ರಮ್ಮ.