ಸುಂದರ ಮೂರ್ತಿ ಮಾಡುತ್ತೇವೆ ಅಂಧ ಮಕ್ಕಳನ್ನು ನಮ್ಮ ಆಶ್ರಮಕ್ಕೆ ಕೊಡಿ; ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಹೇಳಿಕೆ

03122022 kottur tulabhara
Published on


ಕೊಟ್ಟೂರು: ಅಂಧ ಮಕ್ಕಳು ಹುಟ್ಟಿದರೆಂದು ಚಿಂತಿಸಬೇಡಿ, ಇಂತಹವರು ಎಷ್ಟೇ ಮಕ್ಕಳಿರಲಿ, ನಮ್ಮ ಆಶ್ರಮಕ್ಕೆ ತಂದು ಬಿಡಿ, ಅವರಿಗೆ ಉಚಿತ ವಿದ್ಯಾಭ್ಯಾಸ ಕೊಟ್ಟು, ಸಮಾಜಕ್ಕೆ ಹೊರಯಾಗದೆ, ಹೆತ್ತವರಿಗೂ ಭಾರವಾಗದಂತೆ ಸ್ವತಂತ್ರವಾಗಿ ಅವರ ಕಾಲ ಮೇಲೆ ಅವರು ನಿಲ್ಲುವಂತೆ ಸುಂದರ ಮೂರ್ತಿಯಂತೆ ರೂಪಿಸುತ್ತೇವೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶ್ರೀಗುರು ಕೊಟ್ಟೂರು ಬಸವೇಶ್ವರ ನಾಟ್ಯ ಕಲಾ ಸಂಘ ಶನಿವಾರ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಆಶ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಅಂಧರು ಉಚಿತ ವಿದ್ಯಾಭ್ಯಾಸ ಮಾಡುತ್ತಿದ್ದರೆ. ಇವರೆಲ್ಲರ ವಿದ್ಯಾಭ್ಯಾಸಕ್ಕೆ ಪ್ರಸಾದ ವ್ಯವಸ್ಥೆಗೆ ಭಕ್ತರು ಜಾತಿಬೇಧವಿಲ್ಲದೆ ದವಸ, ಧಾನ್ಯ, ಹಣಕಾಸಿನ ನೆರವು ನಿರಂತರ ನೀಡುತ್ತಿದ್ದಾರೆಂದು ಭಾವುಕರಾಗಿ ಹೇಳಿದರು.

ಅಂಧರಿಗೆ ಬದುಕು ಕಲ್ಪಿಸಲು ಸದೃಢವಾಗಿ ನಿಂತಿರುವ ಈ ಆಶ್ರಮ ವೀರೇಶ್ವರ ಕಲಾ ನಾಟ್ಯಸಂಘದ ನಾಟಕಗಳ ಪ್ರದರ್ಶನದಿಂದ ಕ್ರೂಢೀಕೃತವಾದ ಹಣದಿಂದ, ನಮ್ಮ ಗುರುಗಳು ನಾಟಕಗಳಿಗೆ ತಮ್ಮ ಬದುಕನ್ನು ಗಂಧದ ಕೊರಡಿನಂತೆ ತೇದಿರುವುದರಿಂದ ಈಗ ಅಂಧರ ಬಾಳು ಘಮಘಮಿಸುತ್ತಿದೆ ಎಂದರು.

ಇದಕ್ಕೂ ಮುನ್ನ ಕೂಡ್ಲಿಗಿಯ ಪಂಡಿತ ಪುಟ್ಟರಾಜ ಗವಾಯಿಗಳ ದಿವ್ಯ ಸಾಂಸ್ಕೃತಿಕ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷೆ ಕಲಾವಿದೆ ದಿವ್ಯಾ, ಕಲ್ಲಯ್ಯಜ್ಜನವರಿಗೆ 1893ನೇ ತುಲಾಭಾರ ಮಾಡಿದರು.

ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಟ್ಟೂರು ದಿನ ದಿನಕ್ಕೂ ಸಾಂಸ್ಕೃತಿಕವಾಗಿ ಸಂಪತ್ಭರಿತವಾಗುತ್ತಿದೆ. ಮೇಲಾಗಿ ಈ ಸಂಘಟನೆ ಕಲ್ಲಯ್ಯಜ್ಜನವರಿಗೆ ನಾಟ್ಯಗಳಿಂದ ತುಲಾಭಾರ ಮಾಡಿದ ಆ ಹಣ ಅಂಧರ ಬಾಳಿಗೆ ನೆರವಾಗುತ್ತಿದೆ. ಇದು ನಿಜಕ್ಕೂ ಪುಣ್ಯದ ಕೆಲಸ ಎಂದರು.

ಸಮಾಜ ಸೇವಕ ನಾಗರಕಟ್ಟೆ ರಾಜೇಂದ್ರ ಪ್ರಸಾದ್, ಜನಪ್ರತಿನಿಧಿ ಸೂರ್ಯಪಾಪಣ್ಣ, ನಾಟಕ ಅಕಾಡೆಮಿ ಮಾಜಿ ಸದಸ್ಯ ಟಿ. ರಾಜಾರಾವ್, ಪತ್ರಕರ್ತ ಉಜ್ಜಿನಿ ರುದ್ರಪ್ಪ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಗೊಲ್ಲರಹಳ್ಳಿ ಉಮೇಶ, ಉಪಾಧ್ಯಕ್ಷ ಮಂಗಾಪುರದ ಮರುಳಸಿದ್ದಪ್ಪ, ಪಪಂ ಅಧ್ಯಕ್ಷೆ ಭಾರತಿ ಸುಧಾಕರ ಪಾಟೇಲ್ ಇತರರಿದ್ದರು.

ನಾಟಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಸನ್ಮಾನಿಸಲಾಯಿತು. ಹಂಸಪ್ರಿಯ ಕಲಾನಿಕೇತನದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಚಿಗಟೇರಿ ಕೊಟ್ರೇಶ ಸ್ವಾಗತಿಸಿದರು. ಅರವಿಂದ ಬಸಾಪುರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net