ಕೊಟ್ಟೂರಲ್ಲಿ ಇಂದು ಕಾಲೇಜಿನ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನ

Kotturu Pooja Sucide Attempt
ಹೊಸಪೇಟೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಪೂಜಾ.
Published on

ಕೊಟ್ಟೂರು (ವಿಜಯನಗರ): ಶುಲ್ಕ ಕಟ್ಟುವಂತೆ ಪ್ರಾಚಾರ್ಯರಿಂದ ಮಾನಸಿಕ ಕಿರುಕುಳ ಮತ್ತು ಜಾತಿನಿಂದನೆಯಿಂದ ಖಿನ್ನತೆಗೆ ಒಳಗಾದ ಪಟ್ಟಣದ ಇಂದು ಕಾಲೇಜಿನ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಪೂಜಾ, ಕಾಲೇಜಿನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಪೂಜಾಳ ಎರಡು ಕಾಲುಗಳು, ಬೆನ್ನುಮೂಳೆ ಮುರಿದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಲಾ ವಿಭಾಗದಲ್ಲಿ ಸತತ ಆರು ಬಾರಿ ರ‌್ಯಾಂಕ್‌ಗಳನ್ನು ಪಡೆದ ಕಾಲೇಜು ಇದಾಗಿದೆ.

ಘಟನೆ ಕುರಿತಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ಸಹಕಾರದೊಂದಿಗೆ ವಿದ್ಯಾರ್ಥಿನಿ ತಂದೆ ರಾಜಪ್ಪ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದರು. ವಸತಿ-ಕಾಲೇಜಿನ ಶುಲ್ಕ ಸೇರಿ 90 ಸಾವಿರ ರೂ. ಕಟ್ಟಬೇಕಿತ್ತು. ಅದರಲ್ಲಿ 50 ಸಾವಿರ ರೂ. ಕಟ್ಟಿದ್ದೆ. ಕರೊನಾದಿಂದಾಗಿ ಉಳಿದ ಹಣ ಕಟ್ಟಲು ತಡವಾಗಿದೆ. ಆದರೆ, ಹಣ ತರುವಂತೆ ನನ್ನ ಮಗಳಿಗೆ ಒತ್ತಡ ಹೇರಿ, ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ನಮ್ಮ ಸ್ವಗ್ರಾಮ ಕಸವನಹಳ್ಳಿ ಕೊರಚರಹಟ್ಟಿಗೆ ಕಳುಹಿಸಲಾಗಿದೆ. ವಾರದೊಳಗೆ ಹಣಕಟ್ಟುವುದಾಗಿ ಮಗಳಿಗೆ ಹೇಳಿ ಕಳುಹಿಸಿದ್ದೆ. ನೀನು ಹಣ ತಂದಿಲ್ಲ, ಕಾಲೇಜಿಗೆ ಬರಬೇಡವೆಂದು ನನ್ನ ಮಗಳಿಗೆ ಕಾಲೇಜು ಪ್ರಾಚಾರ್ಯ ವೀರಭದ್ರಪ್ಪರು ಹೇಳಿದ್ದಾರೆ. ಜತೆಗೆ ಇತರೆ ವಿದ್ಯಾರ್ಥಿಗಳ ಎದುರು ಜಾತಿ ನಿಂದನೆ ಮಾಡಿದ್ದಾರೆ. ಇದರಿಂದ ಅವಮಾನಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ ಎಂದು ವಿವರಿಸಿದರು.

ಘಟನೆ ನಂತರ ನನಗೆ ಮಾಹಿತಿಯೂ ನೀಡದೇ, ನನ್ನ ಮಗಳನ್ನು ಸರ್ಕಾರಿ ಅಸ್ಪತ್ರೆಗೂ ಸೇರಿಸದೇ, ಹೊಸಪೇಟೆ ಖಾಸಗಿ ಹಾಸ್ಪಿಟಲ್‌ನಲ್ಲಿ ದಾಖಲಿಸಿದ ನಂತರ ನನಗೆ ಫೋನ್ ಬಂದಿದೆ. ನಾವು ಆಸ್ಪತ್ರೆಗೆ ಹೋಗುತ್ತಿದ್ದಂತೆ ಕಾಲೇಜಿನ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದು ಸಂಶಯಕ್ಕೆ ಎಡೆಮಾಡಿದೆ. ನಂತರ ನಾನು, ನಮ್ಮ ಸಮಯದಾಯದ ಮುಖಂಡರಾದ ಕೆ.ಕೊಟ್ರೇಶ, ಕರಿಯಪ್ಪ, ಓಂಕಾರಪ್ಪ, ವಿನಾಯಕ, ಬೋಜರಾಜ್, ಧನಂಜಯ ಹಾಲಪ್ಪ ಸೇರಿಕೊಂಡು ಕಾಲೇಜಿಗೆ ಹೋಗಿ ವೀರಭದ್ರಪ್ಪನವರಿಗೆ ಕಾರಣ ಕೇಳಿದರೆ ಅವರು ಇಲ್ಲಸಲ್ಲದ ಉತ್ತರ ನೀಡಿದ್ದಾರೆ . ಜತೆಗೆ 30 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಘಟನೆ ಕುರಿತಾಗಿ ಪಟ್ಟಣ ಠಾಣೆಯಲ್ಲಿ ಪ್ರಾಚಾರ್ಯ ವೀರಭದ್ರಪ್ಪ ಹಾಗೂ ಕಾಲೇಜು ವ್ಯವಸ್ಥಾಪಕ ಸಂತೋಷ ವಿರುದ್ಧ ದೂರು ನೀಡಿದ್ದೇವೆ ಎಂದರು.

ಕಾಲೇಜು ಮಹಡಿಯಿಂದ ವಿದ್ಯಾರ್ಥಿನಿ ಪೂಜಾ ಹಾರಿದ ಸ್ಥಳವನ್ನು ಶುಕ್ರವಾರ ಮಹಜರು ಮಾಡಲಾಗಿದೆ. ಹಾಸ್ಟೆಲ್ ವಾರ್ಡನ್, ಆಪ್ತ ಸ್ನೇಹಿತರು, ಉಪನ್ಯಾಸಕರನ್ನು ವಿಚಾರಣೆ ಮಾಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.| ಹಾಲಮೂರ್ತಿ ರಾವ್, ಡಿವೈಎಸ್ಪಿ, ಕೊಟ್ಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net