

ಕೊಟ್ಟೂರು: ಜಾರ್ಖಂಡ್‌ನಲ್ಲಿ ಗುರುವಾರ ನಡೆದ 14 ವರ್ಷದೊಳಗಿನ ರಾಷ್ಟ್ರೀಯ ಖೋ ಖೋ ಸ್ಪರ್ದೆಯಲ್ಲಿ ಕರ್ನಾಟಕ ತಂಡ ರನ್ನರ್ ಅಪ್ ಆಗಿದ್ದು, ತಂಡದಲ್ಲಿದ್ದ ಕೊಟ್ಟೂರಿನ ಜಿ.ಪ್ರತೀಕ್ಷಾ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದರು.
ಸ್ಥಳೀಯ ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ಆಟಗಾರ್ತಿಯಾಗಿರುವ ಪ್ರತೀಕ್ಷಾ, ಕಕ ಭಾಗದಿಂದ ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಗೆ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು.
ಜಾರ್ಖಂಡ್‌ದಲ್ಲಿ ನಡೆದ ರಾಷ್ಟ್ರಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ಶಕ್ತಿಮೀರಿ ಹೋರಾಡಿ ಕರ್ನಾಟಕ ತಂಡದಲ್ಲಿ ಪ್ರತೀಕ್ಷಾ ಉತ್ತಮ ಆಟ ಪ್ರದರ್ಶಿಸಿದರು. ಎದುರಾಳಿಯನ್ನು ಔಟ್ ಮಾಡಲು, ಮಿಂಚಿನಂತೆ ಓಟ, ಜಿಂಕಿಯಂತೆ ನೆಗೆತ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿತ್ತು ಎಂದು ಖೋ ಖೋ ತಂಡದ ಕೋಚ್ ತಿಮ್ಮರಾಯಪ್ಪ ಬಣ್ಣಿಸಿದರು.
ಅಪ್ಪಟ ಗ್ರಾಮೀಣ ಪ್ರತಿಭೆ ಕ್ರೀಡಾಪಟುಗಳ ಪ್ರತೀಕ್ಷಾ, ರಾಷ್ಟ್ರಮಟ್ಟದ ಖೋ ಖೋ ತಂಡದಲ್ಲಿ ಸ್ಥಾನ ಪಡೆದು ಆಟವಾಡಿದ್ದು ಹೆಮ್ಮೆ ಮೂಡಿಸಿದೆ ಎಂದು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಂಕರ್ ವಿಜಯವಾಣಿ ಜತೆ ಸಂತಸ ಹಂಚಿಕೊಂಡರು. ವಿಜಯನಗರ ಜಿಲ್ಲೆಯ ಖೋ ಖೋ ಸಂಸ್ಥೆ ಕಾರ್ಯದರ್ಶಿ ಟಿ.ಕರಿಬಸಪ್ಪ ಮಾತನಾಡಿ, ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಇಂತಹ ಪ್ರತಿಭೆಗಳಿದ್ದು, ಅವರನ್ನು ಗುರುತಿಸಿ ಹೊರತರಬೇಕಾಗಿದೆ ಎಂದರು.