ಗೊಂದಲದಲ್ಲೇ ಮುಗಿಯಿತು ಸಭೆ ; ತಹಸೀಲ್ದಾರ್ ಎಂ.ಕುಮಾರಸ್ವಾಮಿ ನೇತೃತ್ವ

021202022 kottur helth dept meeting
Published on

ಕೊಟ್ಟೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಹಸೀಲ್ದಾರ್ ಎಂ. ಕುಮಾರಸ್ವಾಮಿ ನೇತೃತ್ವದಲ್ಲಿ ಒಂದು ವರ್ಷದ ನಂತರ ಶುಕ್ರವಾರ ಕರೆದಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಗೊಂದಲದಲ್ಲೇ ಮುಕ್ತಾಯವಾಯಿತು.

ಐದು ವರ್ಷಗಳಲ್ಲಿ ಆರೋಗ್ಯ ರಕ್ಷಾ ಸಮಿತಿಗೆ 6 ಲಕ್ಷ ರೂ. ಅನುದಾನ ಬಂದಿತ್ತು. ಇದರಲ್ಲಿ ಒಂದು ಸಾವಿರ ರೂ. ಹೊರತು ಪಡಿಸಿ ಉಳಿದ ಹಣವನ್ನು ಆಸ್ಪತ್ರೆ ಅಭಿವೃದ್ಧಿಗೆ ಬಳಸಿರುವುದಾಗಿ ಸಮಿತಿ ಕಾರ್ಯದರ್ಶಿ ಹಾಗೂ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಬದ್ಯಾನಾಯ್ಕ ಹೇಳಿದರು. ಇದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಒಂದು ವರ್ಷದಿಂದ ಸಭೆಯೇ ನಡೆದಿಲ್ಲವೆಂದರೆ, ಈ ಆನುದಾನ ಬಳಸಲು ಯಾರು ಅನುಮತಿ ನೀಡಿದರು. ಚೆಕ್‌ಗೆ ಯಾರು ಸಹಿ ಹಾಕಿದರು ಎಂದು ಸದಸ್ಯರು ಪ್ರಶ್ನೆ ಮಾಡಿದರು. ಪ್ರತಿಕ್ರಿಯಿಸಿದ ಡಾ.ಬದ್ಯಾನಾಯ್ಕ, ಸ್ಪಷ್ಟ ಉತ್ತರ ಕೊಡಲು ತಡವರಿಸಿದರು. ಮೊದಲು ಕೂಡ್ಲಿಗಿ ತಾಪಂ ಸಹಾಯಕ ಲೆಕ್ಕಾಧಿಕಾರಿ ಸಹಿ ಹಾಕಿದ್ದರು ಎಂದ ಅವರು, ಇಲ್ಲ ಇಲ್ಲ ಕೊಟ್ಟೂರು ತಾಪಂ ಲೆಕ್ಕಾಧಿಕಾರಿ ಸಹಿ ಹಾಕಿದ್ದರು ಎಂದರು. ಸ್ವಲ್ಪ ತಡೆದು ಇಲ್ಲ ಇಲ್ಲ ಅವರಲ್ಲ ಮತ್ತೊಬ್ಬ ಲೆಕ್ಕಾಧಿಕಾರಿ ಸಹಿ ಹಾಕಿದ್ದರು ಎಂದರು. ಆದರೆ, ಸ್ಪಷ್ಟವಾದ ಉತ್ತರ ಕೊಡಲಿಲ್ಲ. ಇದರಿಂದ ಸಿಡಿಮಿಡಿಗೊಂಡ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ಎಂ. ಕುಮಾರ ಸ್ವಾಮಿ, ಅನುದಾನ ಬಳಸಿಕೊಂಡಿದ್ದರ ಎಲ್ಲ ವೋಚರ್‌ಗಳನ್ನು ತಂದು ತೋರಿಸಿ ಎಂದು ಆದೇಶಿಸಿದರು.

ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ದುರುಗಪ್ಪ, ಎಂ. ಕಾರ್ತೀಕ, ಆಲ್ತಾಫ್, ಡಾ.ಬದ್ಯಾನಾಯ್ಕರ ಹೇಳಿಕೆಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಲ್ಲದೇ ಸಮಿತಿ ಕಾರ್ಯವೈಖರಿ ಬಗ್ಗೆ ನಮಗೆ ಸ್ಪಷ್ಟ ಮಾಹಿತಿಯನ್ನೂ ಡಾ.ಬದ್ಯಾನಾಯ್ಕ ಹೇಳುವುದಿಲ್ಲ ಎಂದು ಆರೋಪಿಸಿದರು.

ಆಸ್ಪತ್ರೆ ಅವ್ಯವಸ್ಥೆ ಕುರಿತು ಸಭೆಯಲ್ಲಿ ಪ್ರಾಸ್ತಾಪಿಸಿದ ದುರುಗಪ್ಪ, ಎಂ. ಕಾರ್ತಿಕ, , ರೋಗಿಗಳ ಬಗ್ಗೆ ಸಿಬ್ಬಂದಿ ಕಾಳಜಿ ವಹಿಸುತ್ತಿಲ್ಲ. ಸರಿಯಾಗಿ ಔಷಧ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಬದ್ಯಾನಾಯ್ಕ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದ್ದ ಸಿಬ್ಬಂದಿ ಮೇಲೆ ಕೆಲಸದ ಒತ್ತಡವಿದೆ. ಈ ಕಾರಣ ಬಿಟ್ಟರೆ ಬೇರೇನೂ ಇಲ್ಲ ಎಂದರು.

ಆಸ್ಪತ್ರೆ ಅಭಿವೃದ್ಧಿ ಮತ್ತು ಅನುದಾನ ಬಳಕೆ ಸಂಬಂಧ ಸಮಿತಿ ಸದಸ್ಯರು ಡಾ.ಬದ್ಯಾನಾಯ್ಕ ನಡುವೆ ಮಾತಿನ ಚಕಮಕಿ ನಡೆಯಿತು. ಇನ್ನು 10 ದಿನಗಳಲ್ಲಿ 6 ಲಕ್ಷ ರೂ.ಬಳಕೆಗೆ ಸಂಬಂಧಿಸಿದ ವೋಚರ್‌ಗಳನ್ನು ಒಪ್ಪಿಸಬೇಕು. ಇಲ್ಲವಾದರೆ ಬದ್ಯಾನಾಯ್ಕ ವಿರುದ್ಧ ನಾವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾ. ಪ್ರದೀಪ್, ತಾಪಂ ಇಒ ಪರಮೇಶ್ವರಪ್ಪ, ಜೆಸ್ಕಾಂ ಇಂಜಿನೀಯರ್ ಎಸ್. ಚೇತನ್ ಕುಮಾರ್ ಇತರರು ಇದ್ದರು. ಸಮಿತಿ ಸದಸ್ಯೆ ಬಸಮ್ಮ, ತಾಪಂ ಸಹಾಯಕ ಲೆಕ್ಕಾಧಿಕಾರಿ, ಪಪಂ ಅಧ್ಯಕ್ಷೆ, ಜಿಪಂ ಕಾರ್ಯನಿರ್ವಾಹಕ ಇಂಜಿನೀಯರ್ ಸಭೆಗೆ ಹಾಜರಾಗಿರಲ್ಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net