ಪಾಣಿನಿ ಸೂತ್ರಕ್ಕೂ ಕಂಪ್ಯೂಟರ್ ಪ್ರೊಗ್ರಾಮ್‌ಗೂ ಇದೆ ಸಂಬಂಧ; ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾಹಿತಿ

02022023 kottur shivamurthy shivacharya swamiji news
Published on

ವಿಜ್ಞಾನ ವಸ್ತುಪ್ರದರ್ಶನ, ವಿದ್ಯಾರ್ಥಿಗಳೊಂದಿಗೆ ಸಂವಾದ

ಕೊಟ್ಟೂರು: ಕ್ರಿಸ್ತ ಪೂರ್ವ 2500 ವರ್ಷಗಳ ಹಿಂದೆ ಪಾಣಿನಿ ರಚಿಸಿರುವ ಅಷ್ಟಾಧ್ಯಾಯ ಕೃತಿಯಲ್ಲಿ 14 ಸಾವಿರ ಸೂತ್ರಗಳಿದ್ದು, ಇವುಗಳಿಗೂ ಕಂಪ್ಯೂಟರ್ ಫೋಗ್ರಾಮಿಗೂ ಸಂಬಂಧವಿರುವುದನ್ನು ಕಾಣಬಹುದು ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದರು.

ತರಳಬಾಳು ಹುಣ್ಣಿಮೆ ಮಹೋತ್ಸವ ನಿಮಿತ್ತ ಗುರುವಾರ ವಿಜ್ಞಾನ ವಸ್ತುಪ್ರದರ್ಶನ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪವಾಡ ಗುಟ್ಟು ಬಯಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಾಣಿನಿ ಸೂತ್ರವನ್ನು ರುಷಿ ಸುನಖ್ ಎಂಬಾತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಪ್ರಬಂಧ ಮಂಡಿಸಿದ್ದ. ಇದು ಸುಳ್ಳು ಎಂದು ನಾವು ನಿರೂಪಿಸಿದೆವು. ನಟರಾಜನ ನಾಟ್ಯದಲ್ಲಿನ ವಿವಿಧ ಭಂಗಿಗಳ ಆಧಾರದ ಮೇಲೆ ಸಂಸ್ಕೃತದ ವರ್ಣಮಾಲೆಗಳನ್ನು ಶೋಧಿಸಿದ್ದು, ಇವುಗಳ ಆಧಾರದ ಮೇಲೆಯೇ ಪಾಣಿನಿ ತನ್ನೆಲ್ಲ ಸೂತ್ರಗಳನ್ನು ಬರೆದಿದ್ದ. ಇವುಗಳನ್ನೇ ನಾವು ಕಂಪ್ಯೂಟರ್ ಅಳವಡಿಸಿದೆವು ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹಲಿಕಲ್ ನಟರಾಜ್ ಮಾತನಾಡಿ, ಜ್ಞಾನ ಮತ್ತು ವಿಜ್ಞಾನ ನಿರಂತರವಾದುದು. ಪ್ರತಿಯೊಬ್ಬರೂ ಮೂಢನಂಬಿಕೆ ಬಿಡಬೇಕು. ವಿದ್ಯಾರ್ಥಿಗಳು ಮಾನಸಿಕ ವಾಸ್ತು ಬಗ್ಗೆ, ಸೃಜನಾತ್ಮಕತೆ ಬಗ್ಗೆ, ವೈಜ್ಞಾನಿಕತೆ ಬಗ್ಗೆ ಚಿಂತನೆ ಮತ್ತು ಶೋಧನೆ ಮಾಡಬೇಕು ಎಂದರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ. ಸಂದೀಪ ಮಾತನಾಡಿ, ಪ್ರಾಚೀನ ಋಷಿ-ಮುನಿಗಳು ವಿಜ್ಞಾನ ಕ್ಷೇತ್ರಕ್ಕೆ ಅಪಾರಕೊಡುಗೆ ನೀಡಿದ್ದಾರೆ. ವಿಜ್ಞಾನ ನಮ್ಮ ಜ್ಞಾನವನ್ನು ವಿಸ್ತರಿಸುತ್ತದೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗದ ಪ್ರೋ.ಬಿ.ಸಿ.ಪ್ರಸನ್ನಕುಮಾರ್ ಮಾತನಾಡಿ, ಗಣಿತ ಪ್ರಪಂಚದ ಭಾಷೆ ಹಾಗೂ ದೇವರ ಭಾಷೆ. ಜಗತ್ತಿನ ರಹಸ್ಯಗಳನ್ನು ಗಣಿತದ ಮೂಲಕ ಭೇದಿಸಿಬಹುದು. ದೇವರ ನಂತರದ ಸ್ಥಾನ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಪ್ರೋ. ಡಿ.ಜಿ. ಪ್ರಕಾಶ ವಿಜ್ಞಾನದ ಆವಿಷ್ಕಾರಗಳು ಮತ್ತು ಮಾದರಿಗಳ ಕುರಿತು ಮಾತನಾಡಿದರು. ತರಳಬಾಳು ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ರಂಗನಾಥ್ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ವೀರಶೈವ ಸಾಧುಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ತರಳಬಾಳು ವಿದ್ಯಾಸಂಸ್ಥೆಯ 110 ಹಾಗೂ ಕೊಟ್ಟೂರಿನ ಹತ್ತಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

** ಕೋಟ್
ಶೂನ್ಯವನ್ನು ಜಗತ್ತಿಗೆ ಪರಿಚಯಿಸಿದ್ದೇ ಭಾರತ, ಶೂನ್ಯವನ್ನು ಭಾರತೀಯರು ಪರಿಚಯಿಸಿದ್ದು ಎಂದು ಹೆಮ್ಮೆಯಿಂದ ಪಾಶ್ವಿಮಾತ್ಯರು ಅಭಿಮಾನಪಡುತ್ತಾರೆ. ಈ ಶೂನ್ಯ ಕುರಿತು ಉಪನಿಷತ್ತುನಲ್ಲಿ ಉಲ್ಲೇಖವಿದೆ.
| ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಮಠದ ಜಗದ್ಗುರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net