

ಕೊಟ್ಟೂರು: ಕನಕದಾಸರು ಸಮಾಜದಲ್ಲಿನ ಅಸಮಾನತೆ, ತಾರತಮ್ಯ, ವರ್ಣ, ವರ್ಗ ವ್ಯವಸ್ಥೆ ವಿರುದ್ದ ಹೋರಾಡಿ ಸಮಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದ್ದರು. ಆದರೆ, ಅಂದು ಕನಕದಾಸರು ಕಂಡಂತೆ ಕನಸುಗಳು ಇನ್ನೂ ಸಾಕಾರವಾಗಿಲ್ಲ ಎಂದು ಉಪನ್ಯಾಸಕ ಡಿ. ಅಂಜಿನಪ್ಪ ಹೇಳಿದರು.
ತಹಸಿಲ್ ಕಚೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕನಕದಾಸ ಮತ್ತು ಒನಕೆ ಓಬವ್ವನ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಒನಕೆ ಓಬವ್ವನ ಜೀವನ ಚರಿತ್ರೆ ಪುಸ್ತಕ ರಚಿಸಿರುವ ಪತ್ರಕರ್ತ, ಲೇಖಕ ಗಜಾಪುರ ಭೀಮಣ್ಣ ಮಾತನಾಡಿ, ಒಬ್ಬ ಸಾಧಾರಣ ಮಹಿಳೆ ಒಬವ್ವಳ ಸಮಯಪ್ರಜ್ಞೆ, ದೂರದೃಷ್ಟಿಯಿಂದಾಗಿ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ ಸಾಹಸ ವಿವರಿಸಿದರು. ದಸಂಸ ಮುಖಂಡ ತಗ್ಗಿನಕೇರಿ ಕೊಟ್ರೇಶ, ಕನಕದಾಸರನ್ನು ಒಂದೇ ಸಮುದಾಯಕ್ಕೆ ಸೀಮಿತಿಗೊಳಿಸುವುದು ಸೂಕ್ತವಲ್ಲ ಎಂದರು. ಪರುಶುರಾಮಪ್ಪ, ಉಜ್ಜಿನಿ ರುದ್ರಪ್ಪ ಮಾತನಾಡಿದರು. ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಎಪಿಎಂಸಿ ಅಧ್ಯಕ್ಷ ಗೊಲ್ಲರಹಳ್ಳಿ ಉಮೇಶ, ಕುರುಬ ಸಂಘದ ಅಧ್ಯಕ್ಷ ಎಂ. ಮೂಗಪ್ಪ, ಚಲವಾದಿ ಸಂಘದ ಜಿಲ್ಲಾ ಮುಖಂಡ ಹೊಟ್ಟೇರ್ ಅಜ್ಜಯ್ಯ, ಪಪಂ ಮುಖ್ಯಾಧಿಕಾರಿ ನಸರುಲ್ಲಾ ಮುಂತಾದವರಿದ್ದರು.