

ಕೊಟ್ಟೂರು: ದೇಶದ ಪ್ರತಿ ಪಂಚಾಯಿತಿಯಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಿ ಹುತಾತ್ಮ ಯೋಧರ ಸವಿನೆನಪಿಗಾಗಿ ದೆಹಲಿಯಲ್ಲಿ ಪಾರ್ಕ್ ನಿರ್ಮಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಾಪಂ ಸಹಾಯಕ ನಿರ್ದೇಶಕ ವಿಜಯಕುಮಾರ್ ಹೇಳಿದರು.
ಪಟ್ಟಣದ ತಾಪಂನಲ್ಲಿ ತಾಲೂಕಿನ 14 ಗ್ರಾಪಂಗಳಿಂದ ಸಂಗ್ರಹಿಸಲಾದ ಮಣ್ಣನ್ನು ಬಳ್ಳಾರಿಯ ನೆಹರು ಯುವ ಕೇಂದ್ರದ ಕೊಟ್ಟೂರು-ಕೂಡ್ಲಿಗಿ ತಾಲೂಕು ಸಂಯೋಜಕ ವೀರೇಶ ಅವರಿಗೆ ಹಸ್ತಾಂತರಿಸಿ ಮಂಗಳವಾರ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಮನ್‌ಕಿಬಾತ್ ಕಾರ್ಯಕ್ರಮದಲ್ಲಿ ನನ್ನ ದೇಶ ನಮ್ಮ ಮಣ್ಣು ಅಭಿಯಾನದಲ್ಲಿ ಪ್ರತಿ ಪಂಚಾಯಿತಿಯಿಂದ ಹುತಾತ್ಮ ಯೋಧರ ಸವಿನೆನಪಿಗಾಗಿ ದೆಹಲಿಯಲ್ಲಿ ಪಾರ್ಕ್ ನಿರ್ಮಿಸಲು ಮಣ್ಣನ್ನು ಸಂಗ್ರಹಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ 14 ಗ್ರಾಪಂನಿಂದ ಮಣ್ಣನ್ನು ಸಂಗ್ರಹಿಸಲಾಗಿದೆ ಎಂದರು.
ಪ್ರಧಾನಿಯವರ ದೂರದೃಷ್ಟಿ ಮತ್ತು ಕಲ್ಪನೆ ನಿಜಕ್ಕೂ ಮೆಚ್ಚುವಂತಹದ್ದು. ದೆಹಲಿಯಲ್ಲಿ ಹುತಾತ್ಮ ಯೋಧರ ಸವಿನೆನಪಿಗಾಗಿ ನಿರ್ಮಿಸುವ ಪಾರ್ಕ್‌ನಲ್ಲಿ ಒಂದು ಹಿಡಿ ಮಣ್ಣು ನಮ್ಮ ತಾಲೂಕಿನದ್ದೂ ಸೇರುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ವಿಷಯಪಾಲಕರಾದ ರೂಪಾ, ಚಂದ್ರಶೇಖರ್, ಪ್ರಭಾಕರ್, ನೇತ್ರಾವತಿ, ತಾಂತ್ರಿಕ ಸಂಯೋಜಕ ಶ್ರೀಕಾಂತ, ಐಇಸಿ ಸಂಯೋಜಕ ಪ್ರಭು ಉಪ್ಪಾರ್, ಎಂಐಎಸ್ ಸಂಯೋಜಕಿ ನೇತ್ರಾವತಿ, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ಜಿ. ವೀರೇಶ, ಮೆಹಬೂಬ್, ರಾಮಮೂರ್ತಿ, ನಾಗಣ್ಣ, ನಂದೀಶ ಮುಂತಾದವರಿದ್ದರು.