

ಕೊಟ್ಟೂರು: ಶಿಕ್ಷಕ ವೃತ್ತಿ ಜಗತ್ತಿನಲ್ಲಿ ಸರ್ವಶ್ರೇಷ್ಠ. ಜ್ಞಾನದ ದೀವಿಗೆ ಹಚ್ಚಿ ಸನ್ಮಾರ್ಗ ತೋರುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಕರ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆತ್ತವರು ಜೀವಕೊಟ್ಟಿರಬಹುದು. ಆದರೆ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಹರ ಮುನಿದರೂ ನಿಮ್ಮನ್ನು ಗುರುವೊಬ್ಬ ಕಾಯಬಲ್ಲ ಮತ್ತು ಕ್ಷಮಿಸಬಲ್ಲ ಎಂಬುದನ್ನು ಯಾರೂ ಮರೆಯಬಾರದು.
ನಾನು ಕಾಲೇಜು ಮೆಟ್ಟಿಲು ಹತ್ತಿಲ್ಲ. ಬದುಕಿನಲ್ಲಾದ ಬದಲಾವಣೆಯಿಂದ ಜನಪದ ಕಲೆಯನ್ನು ಆರಾಧಿಸಿದೆ. ಇದೀಗ ನನ್ನ ಜೀವನ ಚರಿತ್ರೆ ದೇಶದ 11 ವಿಶ್ವವಿದ್ಯಾಲಯಗಳ ಪದವಿ ಕಾಲೇಜುಗಳಲ್ಲಿ ಪಠ್ಯವಾಗಿದೆ. ನಿರಂತರ ಪರಿಶ್ರಮವಿದ್ದರೆ ಸಾಧನೆ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ವಿಜಯಕುಮಾರ್ ಮಾತನಾಡಿ, ಸಮಾಜ ದಿನ ದಿನಕ್ಕೂ ಕಲುಷಿತವಾಗುತ್ತಿದೆ. ಭ್ರಷ್ಟಾಚಾರ ಅಧಿಕವಾಗುತ್ತದೆ. ಸಣ್ಣಪುಟ್ಟ ವಿಷಯಕ್ಕೂ ಕೇಸ್ ದಾಖಲಾಗುವ ಮೂಲಕ ಸಮಾಜದಲ್ಲಿ ವಾತಾವರಣ ಹದಗೆಡುತ್ತಿರುವುದು ಬೇಸರದ ಸಂಗತಿ ಎಂದರು.
ಹಳೆ ವಿದ್ಯಾರ್ಥಿ ಡಾ. ಜಂಬುನಾಥ ಗೌಡ, ಇಂಜಿನಿಯರ್ ಅಲಬೂರು ಶಾಂತಕುಮಾರ್, ರಂಗಕರ್ಮಿ ಬ್ಯಾಳಿ ವಿಜಯಕುಮಾರ್, ಉಪನ್ಯಾಸಕ ನಾಗರಾಜ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿದರು. ಡೋಣೂರು ಚಾನುಕೋಟಿ ಮಠದ ಡಾ.ಸಿದ್ಧಲಿಂಗರಾಜದೇಶಿ ಕೇಂದ್ರ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಖಾನಾವಳಿ ಶಿವಕುಮಾರ್, ಕೋರಿ ಬಸವರಾಜ್ ಇತರರಿದ್ದರು.