

ಕೊಟ್ಟೂರು: ಸಾಹಿತಿ ಕುಂ.ವೀರಭದ್ರಪ್ಪ ರಕ್ಷಣೆಗೆ ರಾಜ್ಯ ಸರ್ಕಾರ ಗನ್‌ಮ್ಯಾನ್ ನಿಯೋಜಿಸಿದೆ. ಕಳೆದ ಎರಡು ವರ್ಷಗಳಿಂದ ಆಗಂತುಕನೊಬ್ಬ ನಿಯಮಿತವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕುಂ.ವೀರಭದ್ರಪ್ಪಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆಗಂತಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಇದೀಗ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೇಬಲ್‌ನನ್ನು ಕುಂ.ವೀರಭದ್ರಪ್ಪ ಬೆಂಗಾವಲಿಗೆ ನಿಯೋಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕುಂ.ವೀರಭದ್ರಪ್ಪ, ನಾನು ಸ್ವತಂತ್ರವಾಗಿ ಇರಲು ಬಯಸುತ್ತೇನೆ. ನಾನು ಸಾರ್ವಜನಿಕರೊಂದಿಗೆ ಇದ್ದಾಗ ನನ್ನೊಂದಿಗೆ ಗನ್‌ಮ್ಯಾನ್ ಇರುವುದು ಮುಜುಗರ ತರುತ್ತದೆ. ಆದರೂ ಕಾಂಗ್ರೆಸ್ ಸರ್ಕಾರ ಸಾಹಿತಿಗಳ ಭದ್ರತೆಗೆ ಕಾಳಜಿ ವಹಿಸಿದೆ. ಈ ಕಾಳಜಿ ಬಿಜೆಪಿ ಸರ್ಕಾರಕ್ಕೆ ಇರಲಿಲ್ಲ ಎಂದರು.