

ಕೊಟ್ಟೂರು: ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮ ಅಂಧರ ಬಾಳಿಕೆ ಬೆಳಕಾಗಿದೆ. ಶ್ರೀಗಳ ದೂರದೃಷ್ಟಿ ಮತ್ತು ಪರಿಶ್ರಮದಿಂದ ಇಂದು ಅನೇಕ ಅಂಧರು ಸಂಗೀತ ಸೇವೆ ಮಾಡುತ್ತ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಎಂದು ಉಪನ್ಯಾಸಕ ಡಾ. ಕೆ. ರುದ್ರಪ್ಪ ಹೇಳಿದರು.
ತಾಲೂಕಿನ ಕೋಗಳಿ ಗ್ರಾಮದಲ್ಲಿ ಸೋಮವಾರ ಪಂಡಿತ ಪುಟ್ಟರಾಜ ಗವಾಯಿಗಳ ಕಲಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ, ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ, ಸಂಗೀತದ ಎಲ್ಲಾ ಪ್ರಕಾರಗಳಲ್ಲಿ ಪಾಂಡಿತ್ಯ ಪಡೆದು, ಪ್ರತಿಷ್ಠಿತ ಸರಸ್ಪತಿ ಸನ್ಮಾನ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿ ಪಡೆಯುವ ಮೂಲಕ ಚರಿತ್ರೆ ನಿರ್ಮಾಣ ಮಾಡಿದ್ದಾರೆ ಎಂದರು. ಟ್ರಸ್ಟ್ ಉದ್ಘಾಟನೆ ಅಂಗವಾಗಿ ಸಂಗ್ಯಾಬಾಳ್ಯಾ ನಾಟಕ ಪ್ರದರ್ಶನ ಮಾಡಲಾಯಿತು.
ಬಾಗಲಕೋಟೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ರಾಮಚಂದ್ರ ನಾಯ್ಕ, ವಕೀಲರಾದ ಕೊಟ್ರೇಶ, ನಿ. ಉಪನ್ಯಾಸಕರಾದ ಎಚ್.ಎಸ್. ವಸಂತ್, ಇಟಗಿ ಪಿಎಸ್‌ಐ ವೀರೇಶ ಮಾಳಶೆಟ್ಟಿ, ಗ್ರಾಪಂ ಅಧ್ಯಕ್ಷರಾದ ಲಕ್ಷ್ಮೀ ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಂ. ಕರಿಯಪ್ಪ, ಟ್ರಸ್ಟ್ ಅಧ್ಯಕ್ಷ ಕೆ. ಬಸವರಾಜ್, ಗಚ್ಚಿನಕೊಟ್ರೇಶ, ಹೊಂಬಳಿ ಕೊಟ್ರೇಶಪ್ಪ, ಮರುಳಸಿದ್ದಯ್ಯ, ಕಲ್ಯಾಣಿ ಸ್ವಾಮಿ, ಅಶೋಕಯ್ಯ ಮತ್ತಿತರರಿದ್ದರು.