

ಕೊಟ್ಟೂರು: ಸಾವಯವ ಕೃಷಿಗೆ ಉತ್ತೇಜನ ಹಾಗೂ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಮೌಲ್ಯ ದೊರಕಿಸುವ ನಿಟ್ಟಿನಲ್ಲಿ ಪಟ್ಟಣದ ಸಂತೆ ಬಯಲಿನಲ್ಲಿ ಜೂ.10ರಂದು ಸಾವಯವ ಉತ್ಪನ್ನ ಮಾರಾಟ ಸಂತೆ ಆರಂಭವಾಗಲಿದೆ ಎಂದು ಭೂಮಿ ಮಿತ್ರ ಸಾವಯವ ರೈತ ಒಕ್ಕೂಟದ ರಾಜ್ಯ ಸಂಚಾಲಕಿ ವಿ.ಗಾಯತ್ರಿ ಹೇಳಿದರು.
ಪಟ್ಟಣದ ಪಂಚಮಸಾಲಿ ಸಭಾ ಭವನದಲ್ಲಿ ಭಾನುವಾರ ಭೂಮಿ ಮಿತ್ರ ಸಾವಯವ ರೈತ ಒಕ್ಕೂಟ ಮತ್ತು ಇಕ್ರಾ ಜಂಟಿಯಾಗಿ ಆಯೋಜಿಸಿದ್ದ ಸಾವಯವ ರೈತರು-ಗ್ರಾಹಕರ ಸಂವಾದ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಸಾವಯವ ಕೃಷಿಗೆ ಕೊಟ್ಟೂರು ತಾಲೂಕಿನ ರೈತರು ಹೆಚ್ಚು ಆಸಕ್ತಿ ಹೊಂದಿದ್ದು, ಕೃಷಿಯಲ್ಲಿ ಹೊಸತನ, ನವ ಪ್ರಯೋಗಗಕ್ಕೆ ಮುಂದಾಗುತ್ತಿರುವುದು ಖುಷಿಯ ಸಂಗತಿ. ವರ್ಷದಲ್ಲಿ ಎರಡು ಬಾರಿ ರಾಜ್ಯಮಟ್ಟದ ಸಾವಯವ ಕೃಷಿ ಉತ್ಪನ್ನಗಳ ಮೇಳ ಹಾಗೂ ಸಾವಯವ ಕೃಷಿ ಕುರಿತು ಸಮ್ಮೇಳನ ನಡೆಸುವ ಯೋಚನೆ ಇದೆ ಎಂದು ತಿಳಿಸಿದರು.
ಸಾವಯವ ಪ್ರಗತಿಪರ ಕೃಷಿಕ ಶಿವಾನಂದಪ್ಪ, ಒಕ್ಕೂಟದ ತಾಲೂಕು ಅಧ್ಯಕ್ಷ ಅಳವಂಡಿ ಕೊಟ್ರೇಶಪ್ಪ, ಇಕ್ರಾ ಸಂಸ್ಥೆ ತಾಲೂಕು ಸಂಚಾಲಕ ಕೆ. ಮಂಜುನಾಥ್ ಮಾತನಾಡಿದರು. ಹರಾಳು ಗ್ರಾಮದ ಬಸವರಾಜಪ್ಪ ಎನ್. ಅವರು ಏರ್ಪಡಿಸಿದ್ದ ಸಿರಿಧಾನ್ಯಗಳ ಪ್ರದರ್ಶನ ಗಮನಸೆಳೆಯಿತು. ಸಾವಯವ ಕೃಷಿಕ ಲಕ್ಕಪ್ಪ ಹಗರಿಗಜಾಪುರ, ಈಶ್ವರ, ನಾಗರಾಜ್ ನಾಯ್ಕ, ರಾಜಶೇಖರ್, ಗಿರೀಶ, ಡಾ. ವಿಜಯಕುಮಾರ್, ಮಲ್ಲಿಕಾರ್ಜುನ, ಎಲ್‌ಐಸಿ ಅಂಜಿನಪ್ಪ, ಕೊಟ್ರೇಶ, ಕೊಟ್ರಗೌಡ ಇತರರಿದ್ದರು.