

ಕೊಟ್ಟೂರು : ಜಾತಿ ಗಣತಿ ರಾಜಕೀಯ ಪ್ರೇರಿತ ಮತ್ತು ವಾಸ್ತವಕ್ಕೆ ತದ್ವಿರುದ್ಧ ಹಾಗೂ ಅವೈಜ್ಞಾನಿಕವಾಗಿದೆ. ಅಂಕಿ-ಅಂಶಗಳು ಅಚ್ಚರಿ ಮತ್ತು ಸಂಶಯ ಮೂಡಿಸುತ್ತಿವೆ ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಭಾನುವಾರ ತಾಲೂಕು ಪಂಚಮಸಾಲಿ ಸಂಘಟನೆ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಪಂಚಮ ಸಾಲಿ ಸಮಾಜದ ಸಂಘಟನಾ ಸಭೆಯಲ್ಲಿ ಮಾತನಾಡಿದರು.
ಜಾತಿ ಗಣತಿ ಕುರಿತು ಈಗಲೇ ನಾವೇನು ಹೇಳಲ್ಲ. ಏ.17 ರಂದು ಸರ್ಕಾರದಲ್ಲಿ ಚರ್ಚೆಯಾದ ನಂತರ ಹರಿಹರ ಪೀಠಕ್ಕೆ ಸಮಾಜದ ಟ್ರಸ್ಟಿಗಳು, ಅಧ್ಯಕ್ಷರು, ಪ್ರಮುಖರನ್ನು ಆಹ್ವಾನಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅದರೆ, ರಾಜ್ಯದಲ್ಲಿ 65-70 ಲಕ್ಷ ಜನಸಂಖ್ಯೆ ಇರುವ ಪಂಚಮಸಾಲಿಗಳನ್ನು ಜನಗಣತಿಯಲ್ಲಿ ಕೇವಲ 10 ಲಕ್ಷ ಎಂದು ನಮೂದಿಸಿರುವುದು ಅಚ್ಚರಿ ಮೂಡಿಸಿದೆ. ನಾವು ಅಲ್ಪಸಂಖ್ಯಾತರಾಗುವುದಲ್ಲದೆ ರಾಜಕಾರಣದಲ್ಲಿ ಸಮಾಜದ ಪ್ರಾತಿನಿದ್ಯ ಇಳಿಮುಖವಾಗುವುದು ಅಪಾಯಕಾರಿ ಮತ್ತು ಖೇದದ ಸಂಗತಿ ಎಂದರು.
ಸಭೆಯಲ್ಲಿ ಮಾತನಾಡಿದ ಹಲವಾರು ಪ್ರಮುಖರು, ಪಂಚಮಸಾಲಿ ಪೀಠಗಳು ರಾಜಕಾರಣಿಗಳ ಹಿಡಿತದಿಂದ ದೂರವಿರಬೇಕು. ಉಭಯ ಜಗದ್ಗುರುಗಳು ಒಂದೇ ವೇದಿಕೆಯಲ್ಲಿ ಸಮಾಜ ಸಂಘಟಿಸಬೇಕು. ಸಮಾಜ ಆರ್ಥಿಕವಾಗಿ ಸದೃಢವಾಗಲು ಎಲ್ಲರೂ ಕೈಜೋಡಿಸಬೇಕು ಎಂಬುದಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಜಿಲ್ಲಾಧ್ಯಕ್ಷ ಪ್ರಕಾಶ ಪಾಟೇಲ್, ಹರಿಹರ ಪೀಠದ ಆಡಳಿತಾಧಿಕಾರಿ ಡಾ. ರಾಜಕುಮಾರ್, ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಎಂ.ಪಾಟೇಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ದೇವರಮನಿ ಶಿವಚರಣ, ಕಿಚಿಡಿ ಕೊಟ್ರೇಶ, ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ಬಸಾಪುರ ಪಂಪಾಪತಿ ಇತರರಿದ್ದರು.