

ಕೊಟ್ಟೂರು : ನಿರಂತರ ಮಳೆಯಿಂದ ಈರುಳ್ಳಿ ಬೆಳೆ ಹಾನಿಗೀಡಾಗಿದ್ದು, ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ಸೋಮವಾರ ಪಟ್ಟಣದ ಬಸ್ ನಿಲ್ದಾಣ ಬಳಿ ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿತು.
ಸಂಘದ ಅಧ್ಯಕ್ಷ ಎನ್.ಎಂ.ಸಿದ್ದೇಶ ಮಾತನಾಡಿ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಈರುಳ್ಳಿ ಬೆಳೆಗಾರರಿದ್ದಾರೆ. ದೇಶದಲ್ಲಿ ಕರ್ನಾಟಕ ಈರುಳ್ಳಿ ಬೆಳೆಯುವಲ್ಲಿ ದ್ವಿತೀಯ ಸ್ಥಾನದಲ್ಲಿದೆ. ವಿಜಯನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಈರುಳ್ಳಿ ಬೆಳೆಗಾರರಿದ್ದಾರೆ. ಆದರೆ ಅಧಿಕ ಮಳೆಯಿಂದಾಗಿ ಈರುಳ್ಳಿ ಬೆಳೆನಾಶವಾಗಿ ರೈತರು ನಷ್ಟದ ಅನುಭವಿಸಿದ್ದು, ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಈರುಳ್ಳಿ ಬೆಳೆಗಾರರು ಬೆಳೆ ವಿಮೆ ಮಾಡಿಸಿದ್ದು, ಪ್ರಕೃತಿ ವಿಕೋಪದಿಂದ ಹೊಲದಲ್ಲಿಯೇ ಈರುಳ್ಳಿ ಕೊಳೆತು ಹೋಗಿದೆ. ಆದರೆ ಬೆಳೆ ವಿಮೆ ಕಂಪನಿ ರೈತರಿಗೆ ವಿಮೆ ಸಂದಾಯ ಮಾಡಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ಬೆಳೆ ವಿಮೆ ಕೊಡಿಸಬೇಕೆಂದು ಆಗ್ರಹಿಸಿದರು.ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ತಹಸೀಲ್ದಾರ್ ಜಿ.ಕೆ. ಅಮರೇಶಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಮರುಳಸಿದ್ದಪ್ಪ, ಪ್ರಮುಖರಾದ ಎ.ಸಿದ್ದಪ್ಪ, ಎಂ.ಉಮೇಶ, ಮಲ್ಲಿಕಾರ್ಜುನ, ಡಿ. ಉಮೇಶ, ಬಿ.ಭದ್ರಗೌಡ, ಎಲ್.ಮಂಜುನಾಥ್, ಹನುಮಂತಪ್ಪ ಇತರರಿದ್ದರು.