ಕೊಟ್ಟೂರು: ಕರೊನಾ ತಡೆಗಟ್ಟಲು ಅಗ್ನಿಹೋತ್ರ ಹೋಮ ಏಕೈಕ ಮಾರ್ಗವಾಗಿದ್ದು, ವರ್ಗ, ವರ್ಣಬೇಧವಿಲ್ಲದೆ ಆಚರಿಸಬಹುದು ಎಂದು ಸಾರಂಗಮಠದ ರವೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ತಮ್ಮ ಷಟ್‌ಸ್ಥಲಧಾಮದಲ್ಲಿ ಸೋಮವಾರ ಬೆಳಗ್ಗೆ ಅಗ್ನಿಹೋತ್ರ ಹೋಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ವೇದದ ಕಾಲದಿಂದ ಋಷಿಗಳು ಆಶ್ರಮದಲ್ಲಿ ದುಷ್ಟಶಕ್ತಿಗಳು ಮತ್ತು ವಾತಾವರಣ ಶುದ್ಧ್ದಿ, ಬದುಕಿನಲ್ಲಿ ಚೈತನ್ಯಕ್ಕಾಗಿ ಅಗ್ನಿಹೋತ್ರ ಹೋಮ ಆಚರಿಸುತ್ತಿದ್ದರು. ಹಲವು ದಶಕಗಳ ಹಿಂದೆ ಭೂಪಾಲದಲ್ಲಿ ಅನಿಲ ದುರಂತ ನಡೆಯಿತು. ಸಾವಿರಾರು ಜನರು ಮರಣಹೊಂದಿದ್ದರು. ಆದರೆ, ಈ ಸಂದರ್ಭ ಅಗ್ನಿಹೋತ್ರ ಹೋಮ ಮಾಡುತ್ತಿದ್ದ ಕುಟುಂಬದ ಸದಸ್ಯರಿಗೆ ವಿಷಾನಿಲ ಸೋಂಕಲಿಲ್ಲ ಎಂಬುದು ಈಗ ಇತಿಹಾಸ. ಇದು ನಮ್ಮ ಕಣ್ಮುಂದೆ ಇರುವಂತಹ ಸತ್ಯ ಎಂದರು.
ಹೆಚ್ಚು ವೆಚ್ಚವಿಲ್ಲದೆ, ಸೂರ್ಯೋದಯಕ್ಕೂ ಮುಂಚೆ, ಸೂರ್ಯಾಸ್ತದ ನಂತರ ಅಗ್ನಿಹೋತ್ರ ಹೋಮ ಮಾಡುವುದರಿಂದ ರೋಗಾಣುಗಳು ನಾಶವಾಗುತ್ತವೆ. ವಾತಾವರಣ ಶುದ್ಧಿಯಾಗುತ್ತದೆ. ಕರೊನಾ ಹರಡುವುದನ್ನು ತಡೆಗಟ್ಟಲು ಇದು ಏಕೈಕ ಸರಳ, ಸುಲಭದ ಮಾರ್ಗ ಎಂದು ಹೇಳಿದರು. ದೇಶದ ಜನರ ಆರೋಗ್ಯ ರಕ್ಷಣೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಪ್ರತಿಮನೆಯಲ್ಲೇ ಅಗ್ನಿಹೋತ್ರ ಹೋಮ ಆಚರಿಸಲು ಆಜ್ಞೆ ಮಾಡಬೇಕು. ಇದು ವೈಜ್ಞಾನಿಕವಾಗಿ ದೃಢಪಟ್ಟಿರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಆಚರಿಸಬೇಕು ಎಂದು ಮನವಿ ಮಾಡಿದರು.